Raichur| ಹಟ್ಟಿಯಲ್ಲಿ ಯುವತಿಯ ಕೊಲೆ; ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ

ಲಿಂಗಸುಗೂರು: ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಜ್ಯೋತಿ ಎಂಬ ಯುವತಿಯ ನಿಗೂಢ ಸಾವಿನ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಹಟ್ಟಿ ಪಟ್ಟಣದ ಪಾಮನಕಲ್ಲೂರ ಕ್ರಾಸ್‌ನಿಂದ ಆರಂಭವಾದ ಮೆರವಣಿಗೆ ಹಳೆ ಬಸ್ ನಿಲ್ದಾಣ, ಕೋಠಾ ಕ್ರಾಸ್ ಮೂಲಕ ಸಾಗುತ್ತಾ ಕೆನರಾ ಬ್ಯಾಂಕ್ ವರೆಗೆ ತೆರಳಿ, ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ವಾರ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣ ವ್ಯಾಪ್ತಿಯ ಹಿರೇನಗನೂರು ಗ್ರಾಮದ ನಿವಾಸಿ, ಸ್ಟಾಫ್ ನರ್ಸ್ ಜ್ಯೋತಿ ಅವರನ್ನು ರೋಡ್ ರೋಲರ್ ವಾಹನಕ್ಕೆ ನೇಣು ಬಿಗಿದು ಕೊಲೆ ಮಾಡಲಾಗಿದೆ. ಇದು ಪೂರ್ವ ಯೋಜಿತ ಕೊಲೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಹಟ್ಟಿ ಪಟ್ಟಣದಲ್ಲಿ ಇಂತಹ ಅನೇಕ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಅವು ಬಹುತೇಕ ಬೆಳಕಿಗೆ ಬಾರದೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಇಂತಹ ಎಲ್ಲಾ ಪ್ರಕರಣಗಳನ್ನು ತೀವ್ರವಾಗಿ ವಿರೋಧಿಸುವುದರ ಜೊತೆಗೆ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಹಿಳಾ ಒಕ್ಕೂಟ ಅಧ್ಯಕ್ಷೆ ವಿದ್ಯಾ ಪಾಟೀಲ್, ಜ್ಯೋತಿ ಕೊಲೆಗೆ ಹಾಕಿರುವ ಸೆಕ್ಷನ್ ಗಳು ಸರಳವಾಗಿವೆ. ಕೂಡಲೇ ಕಠಿಣ ಸೆಕ್ಷನ್ ಸೇರಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ವಿರುಪಮಾ ಸಿಂಧನೂರು, ಹಟ್ಟಿ ಪಟ್ಟಣದಲ್ಲಿ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ, ಸ್ಟಾಫ್ ನರ್ಸ್ ಹಾಗೂ ಇಂತಹ ಹಲವು ಪ್ರಕರಣಗಳು ನಡೆದರೂ ಪೊಲೀಸರು ಕಠಿಣ ಶಿಕ್ಷೆ ವಿಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗುರುರಾಜ್, ಮೌಕ್ಷಮ್ಮ, ಮಾರೆಮ್ಮ ರಾಯಚೂರು, ಗುಂಡಪ್ಪ ಯರಡೋಣ, ಲಕ್ಷ್ಮೀ ಹಕ್ಕಾವಟಗಿ, ರಾಧಾ ಐದನಾಳ, ದುರುಗಪ್ಪ, ಇನ್ನಿತರರು ಉಪಸ್ಥಿತರಿದ್ದರು.







