Raichur | ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ ಆಚರಣೆ

ರಾಯಚೂರು : ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ಗುರುವಾರ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಅವರು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಪ್ರತಿ ವರ್ಷ ಮೇ 21ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಭಯೋತ್ಪಾದನೆಯನ್ನು ಮಟ್ಟಹಾಕಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸ್ವಾರ್ಥವನ್ನು ಬಿಟ್ಟು ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಭಯೋತ್ಪಾದನೆ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜಾಗೃತರಾಗದಿದ್ದರೆ ಸಮಾಜಘಾತಕ ಶಕ್ತಿಗಳು ಹಾಗೂ ಭಯೋತ್ಪಾದಕರು ಅಮಾನುಷ ಕೃತ್ಯಗಳನ್ನು ಮುಂದುವರಿಸುತ್ತಾರೆ. ಇದರಿಂದ ಅಮಾಯಕರು ಜೀವ ಕಳೆದುಕೊಳ್ಳುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ ಕೆ., ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್ ಸೇರಿದಂತೆ ಜಿಲ್ಲಾ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.






