Raichur | ಯುವಜನರಲ್ಲಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವುದು ಅಗತ್ಯ: ಡಾ. ನಂದಿತಾ ಎಂ.ಎನ್.

ರಾಯಚೂರು: ದೇಹದಲ್ಲಿ ಒಮ್ಮೆ ಎಚ್‌ಐವಿ ವೈರಸ್ ಪ್ರವೇಶಿಸಿದರೆ ಸೋಂಕು ದೀರ್ಘಕಾಲ ಉಳಿಯುತ್ತದೆ. ಆದ್ದರಿಂದ ಎಚ್‌ಐವಿ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರೂ ಕೈಜೋಡಿಸಬೇಕು. ಯುವಜನರು ಎಚ್‌ಐವಿ ಸೋಂಕಿಗೆ ಒಳಗಾಗದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಹೇಳಿದರು.
ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕ್ರೀಡಾ ಇಲಾಖೆ, ಪದವಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಎನ್‌ಎಸ್‌ಎಸ್ ವಿಭಾಗ, ರಿಮ್ಸ್, ರೆಡ್‌ಕ್ರಾಸ್, ರೆಡ್ ರಿಬ್ಬನ್, ಸೈಂಟ್ ಲೂಕ್ ಹಾಗೂ ಹೊಸ ಬೆಳಕು ಸಂಸ್ಥೆಗಳ ಸಂಯೋಜನೆಯೊಂದಿಗೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕವು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಯುವಜನೋತ್ಸವದ ಅಂಗವಾಗಿ ನಡೆದ ಐದು ಕಿ.ಮೀ. ರೆಡ್ ರಿಬ್ಬನ್ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಬಳಸಿದ ಸಿರಿಂಜ್‌ಗಳನ್ನು ಮರುಬಳಕೆ ಮಾಡುವುದು, ಪರೀಕ್ಷೆಗೆ ಒಳಪಡಿಸದ ರಕ್ತವನ್ನು ಪಡೆಯುವುದು ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವ ಸಾಧ್ಯತೆಗಳಿವೆ. ಇವುಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ವಿಶೇಷವಾಗಿ ಹದಿಹರೆಯದವರು ಭವಿಷ್ಯದಲ್ಲಿ ಎಚ್‌ಐವಿ ಸೋಂಕಿಗೆ ಒಳಗಾಗದಂತೆ ಇಂದಿನಿಂದಲೇ ಜಾಗೃತಿ ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಎಚ್‌ಐವಿ ಕುರಿತು ಸ್ವಯಂಪ್ರೇರಿತವಾಗಿ ಮಾಹಿತಿ ಪಡೆಯಲು ಕ್ಯೂಆರ್ ಕೋಡ್ ಮೂಲಕ ಪ್ರಶ್ನೋತ್ತರ ವಿಧಾನವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಹೇಳಿದರು.
ಐದು ಕಿ.ಮೀ. ಮ್ಯಾರಥಾನ್ :
ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಐದು ಕಿ.ಮೀ. ಮ್ಯಾರಥಾನ್ ಸ್ಟೇಷನ್ ರಸ್ತೆ ಹಾಗೂ ಮಂತ್ರಾಲಯ ರಸ್ತೆಯ ಮೂಲಕ ಅಥಿತಿ ಹೋಟೆಲ್‌ವರೆಗೆ ಸಾಗಿ, ಅಲ್ಲಿಂದ ಮರಳಿ ಕ್ರೀಡಾಂಗಣ ತಲುಪಿತು. ಮ್ಯಾರಥಾನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 5,000 ರೂ., ದ್ವಿತೀಯ ಬಹುಮಾನವಾಗಿ 3,000 ರೂ. ಹಾಗೂ ತೃತೀಯ ಬಹುಮಾನವಾಗಿ 2,000 ರೂ. ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಿಮ್ಸ್ ಪ್ರಭಾರಿ ಡೀನ್ ಡಾ. ಮಂಜುನಾಥ್, ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ಅಮರ್ ವರ್ಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಡ್ಯಾಪ್ಕೋ ಅಧಿಕಾರಿ ಡಾ. ಯಶೋಧಾ, ಎನ್‌ಎಸ್‌ಎಸ್ ಅಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ರೆಡ್‌ಕ್ರಾಸ್ ಸಂಚಾಲಕ ಡಾ. ದಂಡಪ್ಪ ಬಿರಾದಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ಬಿಎಚ್‌ಇಒ ನಾಗರಾಜ್, ಹೊಸ ಬೆಳಕು ಸಂಸ್ಥೆಯ ದೇವರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಡ್ಯಾಪ್ಕೋ ಸಿಬ್ಬಂದಿ ಉಪಸ್ಥಿತರಿದ್ದರು.






