Raichur | NEET ಪರೀಕ್ಷೆ ರದ್ದು : ಕೇಂದ್ರ ಸರಕಾರದ ವೈಫಲ್ಯ, ಶಿಕ್ಷಣ ಸಚಿವರ ರಾಜೀನಾಮೆಗೆ ಡಾ.ರಝಾಕ್ ಉಸ್ತಾದ್ ಆಗ್ರಹ

ರಾಯಚೂರು : ದೇಶದಲ್ಲಿ ಮೇ 3ರಂದು ನಡೆದ ವೈದ್ಯಕೀಯ ನೀಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ನಡೆಸಲು ವಿಫಲವಾಗಿ ಬಳಿಕ ರದ್ದುಪಡಿಸಿರುವುದು ಪರೀಕ್ಷೆ ಬರೆದ ಸುಮಾರು 23 ಲಕ್ಷ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವಾಗಿದ್ದು, ಇದು ಕೇಂದ್ರ ಸರ್ಕಾರದ ದೊಡ್ಡ ಹಗರಣವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ. ರಝಾಕ ಉಸ್ತಾದ ಆರೋಪಿಸಿದ್ದಾರೆ.
ಕಳೆದ ಐದು-ಆರು ವರ್ಷಗಳಲ್ಲಿ ಮೂರು ಬಾರಿ ನೀಟ್ ಪರೀಕ್ಷೆ ರದ್ದಾಗಿರುವುದು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಾಜಸ್ಥಾನ ಹಾಗೂ ಹರಿಯಾಣ ರಾಜ್ಯಗಳ ಕೆಲ ಕೋಚಿಂಗ್ ಸೆಂಟರ್‌ಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಆರೋಪಗಳು ಕೇಳಿಬರುತ್ತಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವೈದ್ಯಕೀಯ ಪ್ರವೇಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಎರಡು-ಮೂರು ವರ್ಷಗಳಿಂದ ನಿರಂತರವಾಗಿ ತಯಾರಿ ನಡೆಸುತ್ತಿದ್ದು, ಇದು ಯುಪಿಎಸ್ಸಿ ಮಟ್ಟದ ಸವಾಲಿನ ಪರೀಕ್ಷೆಯಾಗಿದೆ. ಇಂತಹ ಗಂಭೀರ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆಸಬೇಕಿದ್ದ ಕೇಂದ್ರ ಸರ್ಕಾರ ಪ್ರತೀ ವರ್ಷ ಒಂದಲ್ಲೊಂದು ಗೊಂದಲ, ಅಕ್ರಮ ಮತ್ತು ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದು ಅವರು ದೂರಿದರು.
ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ದೇಶದ ಮುಂದಿವೆ. ಆದರೂ ಸರ್ಕಾರ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ವಿಫಲವಾಗಿದೆ. ಶ್ರೀಮಂತ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ನೀಟ್ ಪರೀಕ್ಷೆ ಆರಂಭವಾದ ಬಳಿಕ ಕೋಚಿಂಗ್ ಸೆಂಟರ್‌ಗಳ ಹಾವಳಿ ಹೆಚ್ಚಾಗಿದ್ದು, ಪರೀಕ್ಷೆಯನ್ನೇ ಖರೀದಿ ಮಾಡುವ ಮಟ್ಟಕ್ಕೆ ವ್ಯವಸ್ಥೆ ಕುಸಿದಿರುವುದು ದುರಂತಕರ ಸಂಗತಿಯಾಗಿದೆ. ವೈದ್ಯಕೀಯ ಸೀಟುಗಳು ಬಡವರ ಮಕ್ಕಳ ಪಾಲಿಗೆ ಕನಸಾಗುತ್ತಿವೆ ಎಂದು ಹೇಳಿದರು.
ಮೇ 3ರಂದು ಪರೀಕ್ಷೆ ಬರೆದು ನೆಮ್ಮದಿ ಕಂಡಿದ್ದ ವಿದ್ಯಾರ್ಥಿಗಳಿಗೆ ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಪರೀಕ್ಷೆ ರದ್ದಾದ ಸುದ್ದಿ ಆಘಾತ ಉಂಟುಮಾಡಿದೆ. ದೂರದ ಪರೀಕ್ಷಾ ಕೇಂದ್ರಗಳಿಗೆ ಮತ್ತೆ ತೆರಳಬೇಕಾಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಅನಗತ್ಯ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ನೀಟ್ ಪರೀಕ್ಷೆಯ ಮೇಲಿನ ಜನರ ವಿಶ್ವಾಸ ಕುಸಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
2026ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹಾಗೂ ಭಾಗಿಯಾದ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಅಥವಾ ಫಲಾನುಭವಿಗಳಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ. ರಝಾಕ ಉಸ್ತಾದ ಒತ್ತಾಯಿಸಿದರು.






