Raichur | ಓಪೆಕ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಆರೋಪ: ಗಾಯದ ಡ್ರೆಸ್ಸಿಂಗ್ ವೇಳೆ ಹುಳುಗಳು ಪತ್ತೆ!
ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ; ತನಿಖೆಗೆ ಆಗ್ರಹ

ರಾಯಚೂರು: ಅಪಘಾತದಲ್ಲಿ ಗಾಯಗೊಂಡು ನಗರದ ಹೈದರಾಬಾದ್ ರಸ್ತೆಯಲ್ಲಿರುವ ಓಪೆಕ್ ಆಸ್ಪತ್ರೆಗೆ ದಾಖಲಾಗಿರುವ ಯಾದಗಿರಿ ಮೂಲದ ಮಹೇಶ್ವರಿ ಎಂಬ ಮಹಿಳೆಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ಮೂರು ದಿನಗಳಿಂದ ಗಾಯಕ್ಕೆ ಸರಿಯಾಗಿ ಡ್ರೆಸ್ಸಿಂಗ್ ಮಾಡಿಲ್ಲ. ಮಂಗಳವಾರ ಡ್ರೆಸ್ಸಿಂಗ್ ಮಾಡಲು ಬ್ಯಾಂಡೇಜ್ ಬಿಚ್ಚಿದಾಗ ಗಾಯದಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಯಾದಗಿರಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಹೇಶ್ವರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಗಾಯಕ್ಕೆ ಸಮರ್ಪಕವಾಗಿ ಡ್ರೆಸ್ಸಿಂಗ್ ಮಾಡಿಲ್ಲ ಹಾಗೂ ಅಗತ್ಯ ಆರೈಕೆ ಒದಗಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಗಳವಾರ ಗಾಯಕ್ಕೆ ಡ್ರೆಸ್ಸಿಂಗ್ ಮಾಡಲು ಬ್ಯಾಂಡೇಜ್ ಬಿಚ್ಚಿದ ಸಂದರ್ಭದಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಚಿಕಿತ್ಸಾ ನಿರ್ಲಕ್ಷ್ಯದ ಆರೋಪ :
ಅಪಘಾತದಲ್ಲಿ ಗಾಯಗೊಂಡ ರೋಗಿಗಳಿಗೆ ನಿರಂತರ ಚಿಕಿತ್ಸೆ, ಗಾಯದ ಸ್ಥಿತಿಯ ಪರಿಶೀಲನೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಡ್ರೆಸ್ಸಿಂಗ್ ಮಾಡುವುದು ಅತ್ಯಗತ್ಯ. ಇಂತಹ ಸಂದರ್ಭದಲ್ಲಿ ಮೂರು ದಿನಗಳಿಂದ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಲ್ಲ ಹೀಗಾಗಿಯೇ ಹುಳುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಿಳೆಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






