ರಾಯಚೂರು| ಹೋಟೆಲ್ ಗಳು, ರೆಸ್ಟೊರೆಂಟ್ ಗಳಲ್ಲಿ ಅಶುಚಿತ್ವ ದೂರು: ಅಧಿಕಾರಿಗಳಿಂದ ದೀಢೀರ್ ದಾಳಿ

ರಾಯಚೂರು: ಜಿಲ್ಲಾಡಳಿತ ಹಾಗೂ ರಾಯಚೂರು ಮಹಾನಗರ ಪಾಲಿಕೆಯಿಂದ ಸೆ.19ರಂದು ಸಂಜೆ ವೇಳೆ ದಿಢೀರ್ ದಾಳಿ ನಡೆಸಿ ವಿವಿಧ ಹೊಟೆಲ್‌ಗಳು, ಚಹಾ ಅಂಗಡಿಗಳು, ರೆಸ್ಟೊರೆಂಟಗಳು ಮತ್ತು ಬಾರಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.
ರಾಯಚೂರು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ಒಂದು ತಂಡವು ರೈಲ್ವೆ ನಿಲಾಣದ ಸುತ್ತಲಿನ 10ಕ್ಕೂ ಹೆಚ್ಚು ವಿವಿಧ ಹೊಟೆಲ್‌ಗಳು, ಚಹಾ ಅಂಗಡಿಗಳು ಮತ್ತು ರೆಸ್ಟೊರೆಂಟಗಳ ಮೇಲೆ ದಾಳಿ ನಡೆಸಿ 30 ಸಾವಿರ ರೂ.ವರೆಗೆ ದಂಡಿ ವಿಧಿಸಿತು.
ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ಮತ್ತೊಂದು ತಂಡವು ಸಹ ಸುಮಾರು 10 ಕ್ಕೂ ಹೆಚ್ಚು ಬಾರ್ ಹಾಗೂ ರೆಸ್ಟೋರೆಂಟೆಗಳು ಮತ್ತು ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಾಮಗ್ರಿಗಳು, ಶುಚಿತ್ವದ ಬಗ್ಗೆ ಪರಿಶೀಲಿಸಿ 50 ಸಾವಿರ ರೂ.ಗಳರೆಗೆ ದಂಡ ವಿಧಿಸಿದರು.
ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದ ತಂಡವು ರೈಲ್ವೆ ನಿಲ್ದಾಣದ ಸುತ್ತಲಿನ ಸಸ್ಯಹಾರಿ ಮತ್ತು ಮೌಂಸಾಹಾರಿ ಹೊಟೆಲ್‌ಗಳಿಗೆ ಪ್ರವೇಶಿಸಿ ಅವರು ಅಡುಗೆಗೆ ಬಳಸುವ ನಾನಾ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿತು.
ಹೊಟೆಲ್‌ನ ಆವರಣದ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಲು ವಿಫಲರಾಗಿದ್ದಾರೆ ಮತ್ತು ದುರ್ನಾತ ಬರುತ್ತಿದೆ. ಅಡುಗೆಗೆ ಬಣ್ಣವನ್ನು ಕಾನೂನಿನ ಪ್ರಕಾರ 100 ಪಿಪಿಎಂಗಿಂತ ಅಧಿಕ ಬಳಸುತ್ತಿದ್ದಾರೆ ಎಂದು ಕೆಲ ಹೊಟೆಲಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ನೊಟೀಸ್ ಜಾರಿ ಮಾಡಿದೆ.
ಭೇಟಿ ಸಂದರ್ಭದಲ್ಲಿ ಕೆಲ ಹೊಟೆಲಗಳಲ್ಲಿನ ನೀರಿನ ತೊಟ್ಟಿಗಳು ಮತ್ತು ಟ್ಯಾಂಕಗಳನ್ನು ಪರಿಶೀಲಿಸಲಾಯಿತು. ನೀರಿನ ತೊಟ್ಟಿಯು ಜಂಗು ಹತ್ತಿದಂತೆ ಮತ್ತು ಅಶುಚಿತ್ವ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಲು ಬಾಟಲಗಳಲ್ಲಿ ನೀರು ಸಂಗ್ರಹಿಸಲಾಯಿತು. ಪ್ರತಿ ದಿನ ನೀರಿನ ತೊಟ್ಟಿ, ಟ್ಯಾಂಕಗಳನ್ನು ಸ್ವಚ್ಛ ಮಾಡುವಂತೆ ಮಾಲಕರಿಗೆ ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ಬಳಕೆಗೆ ದಂಡ: ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ತಂಡವು ಬಾರ್‌ಗಳಲ್ಲಿ ಸ್ವಚ್ಛತೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪರಿಶೀಲಿಸಿ, ಕೆಲ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್, ನೀರಿನ ಪೌಚ್‌ಗಳ ಬಳಸುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ದಂಡ ವಿಧಿಸಿ ಎಚ್ಚರಿಕೆ ನೀಡಿದರು.







