ಸಚಿವರ ಸಹಕಾರದಿಂದಲೇ ಕೆರೆ ಒತ್ತುವರಿ: ವಿರುಪಾಕ್ಷಿ ಆರೋಪ

ರಾಯಚೂರು: ರಾಜ್ಯ ಸಣ್ಣನೀರಾವರಿ ಖಾತೆ ಸಚಿವ ಎನ್.ಎಸ್ ಬೋಸರಾಜು ಅವರ ಸಹಕಾರದಿಂದಲೇ ನಗರದ ಕೃಷ್ಣಗಿರಿ ಹಿಲ್ಸ್ ಬಡಾವಣೆ ಸಮೀಪದಲ್ಲಿರುವ ಕೆರೆ ಒತ್ತುವರಿ ಮಾಡಲಾಗಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ವೆ ನಂಬರ್ 1405ರ 20ಎಕರೆ ಕರೆಭೂಮಿ(ತುಂಬಳಕೆರೆ ಹಾಗೂ ಅಲಂಕೆರೆ)ಯನ್ನು ಸಿಂಧನೂರಿನ ರಾಮಕೃಷ್ಣ ಎಂಬವರು ಖರೀದಿಸಿ, ಬಡಾವಣೆ ನಿರ್ಮಿಸಿದ್ದಾರೆ. ವಸತಿ ವಿನ್ಯಾಸಕ್ಕೂ ತಹಸೀಲ್ದಾರ ಸೇರಿದಂತೆ ಕಂದಾಯ ಇಲಾಖೆಯ ಅನೇಕ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲ ಕೆರೆಗಳನ್ನು ರಕ್ಷಣಾ ಮಾಡಲಾಗುವುದು ಎಂದು ಸಚಿವರು ಹೇಳುತ್ತಾರೆ. ಆದರೆ, ದಾಖಲೆಗಳಲ್ಲಿ ಕೆರೆವೆಂದ ನಮೂದಿಯಾಗಿದ್ದರೂ ಖರೀದಿಸಿ ವಸತಿ ವಿನ್ಯಾಸವನ್ನು ತೆರವುಗೊಳಿಸಲು ಸಚಿವರು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರು.
ಹೆದ್ದಾರಿ ರಸ್ತೆಗಳಿಗೆ ರೈತರ ಭೂಮಿಯನ್ನು ನೋಟಿಸ್ ನೀಡದೇ ಸ್ವಾಧೀನ ಪಡಿಸಿಕೊಳ್ಳುವ ಜಿಲ್ಲಾಡಳಿತ ನಗರದಲ್ಲಿ ಕೆರೆಗಳನ್ನು ನಾಶ ಮಾಡಲಾಗುತ್ತಿದ್ದಾರೆ. ಕೂಡಲೇ ಕೆರೆಗಳನ್ನು ಉಳಿಸಲು ದೂರು ನೀಡಲಾಗುತ್ತದೆ. ಯಾವುದೇ ಸ್ಪಂದನೆ ದೊರೆಯದೇ ಹೋದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಸಣ್ಣನರಸಿಂಹನಾಯಕ, ರಾಮಕೃಷ್ಣ, ರಾಜು ಸಂಗಟಿ, ನರಸಿಂಹ, ನರಸಪ್ಪ ಆಶಾಪುರು, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.







