ರಾಯಚೂರು | ನರೇಗಾ ಒಂದು ದಿನದ ಯುಕ್ತಧಾರ ತರಬೇತಿ ಕಾರ್ಯಾಗಾರ ಉದ್ಘಾಟನೆ

ರಾಯಚೂರು :ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೆ.24ರಂದು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲಾನಯನ ಮಾದರಿಯಲ್ಲಿ ವೈಜ್ಞಾನಿಕವಾಗಿ ಯೋಜನೆಗಳನ್ನು ಸಿದ್ಧಪಡಿಸಲು ‘ಯುಕ್ತಧಾರ’ ತಂತ್ರಾಂಶ ಕುರಿತು ಒಂದು ದಿನದ ತರಬೇತಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನರೇಗಾ ಯೋಜನೆಯಡಿ ಕಾಮಗಾರಿ ಆರಂಭಿಸಿ ಮಧ್ಯೆ ಬಿಟ್ಟುಬಿಡುವ ಘಟನೆಗಳು ಸಾಮಾನ್ಯವಾಗಿವೆ. ಇಂತಹ ದೂರುಗಳನ್ನು ತಪ್ಪಿಸಿ, ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಯುಕ್ತಧಾರ ತಂತ್ರಾಂಶ ನೆರವಾಗಲಿದೆ ಎಂದು ಹೇಳಿದರು.
ಯುಕ್ತಧಾರ ತಂತ್ರಾಂಶವು ಹಿಂದಿನ ಸ್ವತ್ತುಗಳನ್ನು ವಿಶ್ಲೇಷಿಸಿ ಹೊಸ ಯೋಜನೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ, ನರೇಗಾ ಯೋಜನೆಯಡಿ ಜಿಐಎಸ್ ಆಧಾರಿತ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕಾಗಿದೆ ಎಂದು ವಿವರಿಸಿದರು.
ಈ ತಂತ್ರಾಂಶವು ನರೇಗಾ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ ಹಲವು ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಕಪಗಲ್ ಮತ್ತು ಚಿಂಚರಕಿ ಸೇರಿ ಮೂರು ಗ್ರಾಮ ಪಂಚಾಯಿತಿಗಳು ಯುಕ್ತಧಾರ ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದು, ಯಾವುದೇ ಅಡಚಣೆ ಎದುರಾಗಿಲ್ಲ ಎಂದು ತಿಳಿಸಿದರು.
ತರಬೇತಿಯಲ್ಲಿ ಏನಾದರೂ ತಾಂತ್ರಿಕ ಸಮಸ್ಯೆಗಳು ಎದುರಾದರೆ, ರಾಜ್ಯ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವರಾಜ, ಕಾರ್ಯನಿರ್ವಾಹಕ ಅಧಿಕಾರಿಗಳು ಶಶಿಧರಸ್ವಾಮಿ ಮತ್ತು ಚಂದ್ರಶೇಖರ ಪವಾರ, ವಿವಿಧ ಇಲಾಖೆಗಳ ಅನುಷ್ಟಾನಾಧಿಕಾರಿಗಳು, ತಾಂತ್ರಿಕ ಸಹಾಯಕರು, ಗ್ರಾಮ ಕಾಯಕಮಿತ್ರರು, ಐಇಸಿ ಸಂಯೋಜಕರು ಹಾಗೂ ಗಣಕಯಂತ್ರ ನಿರ್ವಾಹಕರು ಭಾಗವಹಿಸಿದ್ದರು.







