ರಾಯಚೂರು | ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮೃತ್ಯು : ವೈದ್ಯರ ನಿರ್ಲಕ್ಷ್ಯ ಆರೋಪ ; ದೂರು ದಾಖಲು

ರಾಯಚೂರು : ಕಿಡ್ನಿ ಸ್ಟೋನ್ ಇದೆ ಎಂದು ಆಸ್ಪತ್ರೆಗೆ ದಾಖಲಾದ ರೋಗಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ವೈದ್ಯರ ವಿರುದ್ಧ ಪತ್ನಿ ದೂರು ದಾಖಲಿಸಿದ ಘಟನೆ ನಡೆದಿದೆ.
ರಾಯಚೂರಿನ ಸರ್ಕಾರಿ ಆಸ್ಪತ್ರೆಯಾದ ರಾಜೀವ್ ಗಾಂಧಿ ಓಪೆಕ್ ಆಸ್ಪತ್ರೆಯಲ್ಲಿ ಕಳೆದ ಡಿ.7ರಂದು ಮಾನ್ವಿ ತಾಲೂಕಿನ ಕಂಬಳನೆತ್ತಿ ಗ್ರಾಮದ ವಿರುಪಾಕ್ಷಪ್ಪ (49) ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿರೋಗ ತಜ್ಞ ಡಾ.ಪ್ರದೀಪ್ ಕುಲಕರ್ಣಿ ಅವರು ಚಿಕಿತ್ಸೆ ನೀಡಿ ಕಿಡ್ನಿ ಸ್ಟೋನ್ ಇದೆ ಎಂದು ಡಿ.10ರಂದು ಶಸ್ತ್ರಚಿಕಿತ್ಸೆಗೆ ನಡೆಸಿದ್ದರು. ನಂತರ ಪುನಃ ಶಸ್ತ್ರಚಿಕಿತ್ಸೆ ಬಾಧೆಯಿಂದ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಬಿಡುಗಡೆಯಾಗಿದ್ದರು.
ಉಸಿರಾಟದ ತೊಂದರೆಗೆ ಒಳಗಾಗಿ ಪುನಃ ಫೆ.8 ರಂದು ಆಸ್ಪತ್ರೆಗೆ ಬಂದಾಗ ಡಾ.ಪ್ರದೀಪ್ ಕುಲ್ಕರ್ಣಿ ಊರಲ್ಲಿ ಇಲ್ಲ ಎಂದು ಸಿಬ್ಬಂದಿಗಳು ಬೇರೆ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದರು. ಅವರ ಸಲಹೆಯಂತೆ ನವೀನ್ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ವಿರೂಪಾಕ್ಷಪ್ಪನವರ ಎರೆಡು ಕಿಡ್ನಿಗೆ ಸೋಂಕು( ಇನ್ ಫೆಕ್ಷನ್) ಆಗಿದೆ ಬದುಕುಳಿಯುವುದು ಕಷ್ಟ ಎಂದು ಹೇಳಿದ್ದರು. ಫೆ.9ರಂದು ಚಿಕಿತ್ಸೆ ಫಲಕಾರಿ ಆಗದೇ ವಿರುಪಾಕ್ಷಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಸ್ತ್ರ ಚಿಕಿತ್ಸೆ ವೈಫಲ್ಯದಿಂದಲೇ ನನ್ನ ಪತಿ ಮೃತಪಟ್ಟಿದ್ದಾರೆ ಎಂದು ಪತ್ನಿ ಸೋಮೇಶಮ್ಮ ಅವರು, ನೀಡಿದ ದೂರಿನ ಆಧಾರದ ಮೇಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆಯ ಕಲಂ 194 ಅಡಿಯಲ್ಲಿ ದೂರು ಸ್ವೀಕರಿಸಿದ್ದಾರೆ.
ಪ್ರಕರಣದ ಕುರಿತು ಓಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ರಮೇಶ ಸಿ ಸಾಗರ್ ಅವರು ಪ್ರತಿಕ್ರಿಯಿಸಿ, ಡಾ.ಪ್ರದೀಪ್ ಕುಲ್ಕರ್ಣಿ ವಿರುದ್ದ ದೂರು ದಾಖಲಾಗಿದ್ದು, ರಿಮ್ಸ್ ಡೈರೆಕ್ಟರ್ ಅವರ ಸಲಹೆ ಮೇರೆಗೆ ಮೂರು ಜನರ ತಂಡದಿಂದ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.







