ರಾಯಚೂರು | ಘನ ತ್ಯಾಜ್ಯ ವಿಲೇವಾರಿ ಚಾಲಕರಿಗೆ, ಸೂಪರ್ ವೈಸರ್‌ಗೆ ಕನಿಷ್ಠ ವೇತನ ಕೂಡಲೇ ಪಾವತಿಸಿ : ನಾಗರಾಜ ಪೂಜಾರ

ರಾಯಚೂರು: ಸಿಂಧನೂರು ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 27 ಜನ ಘನತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರು, ಸೂಪರ್ ವೈಜರ್ ಹಾಗೂ ಸೆಕ್ಯೂರಿಟಿಗಳಿಗೆ ಕಾರ್ಮಿಕ ಕಾಯ್ದೆಗಳಂತೆ ಕನಿಷ್ಟ ವೇತನ ಪಾವತಿಸುವಂತೆ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಆದೇಶ ನೀಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಕನಿಷ್ಟ ವೇತನ ವ್ಯತ್ಯಾಸ ಹಣ ಹಾಗೂ ಪರಿಹಾರವನ್ನು ಬಿಡುಗಡೆಗೆ ಕ್ರಮವಹಿಸಬೇಕೆಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಎಐಸಿಸಿಟಿಯು ಟ್ರೇಡ್ ಯೂನಿಯನ್ ರಾಜ್ಯ ಸಹಕಾರ್ಯದರ್ಶಿ ನಾಗರಾಜ ಪೂಜಾರ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, 2016 ರಿಂದ ಸಿಂಧನೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ಜನ ಕಾರ್ಮಿಕರಿಗೆ ಕನಿಷ್ಟ ವೇತನ ನೀಡದೇ ವಂಚಿಸಲಾಗಿತ್ತು. ಅನೇಕ ಬಾರಿ ಹೋರಾಟ ಹಾಗೂ ಮನವಿ ನೀಡಿದರೂ, ಸ್ಪಂದಿಸದೇ ಹೋದಾಗ ಕಲ್ಬುರ್ಗಿ ವಿಭಾಗ ಕಾರ್ಮಿಕ ಆಯುಕ್ತರ ಮೊರೆ ಹೋಗಲಾಗಿತ್ತು. ಅರ್ಜಿ ವಿಚಾರಣೆ ನಡೆಸಿರುವ ಆಯುಕ್ತರು ಅ.8 ರಂದು ಆದೇಶ ಹೊರಡಿಸಿದ್ದಾರೆ. 27 ಜನ ಕಾರ್ಮಿಕರಿಗೆ ಕನಿಷ್ಟ ವೇತನ ವ್ಯತ್ಯಾಸ ಹಣ 73 ಲಕ್ಷ 55 ಸಾವಿರ ರೂ. ಹಾಗೂ ಪರಿಹಾರವಾಗಿ 1 ಲಕ್ಷ 35 ಸಾವಿರ ರೂ. ಪರಿಹಾರ ಸೇರಿ 74 ಲಕ್ಷ 90 ಸಾವಿರ ರೂ. ಹಣವನ್ನು ನೀಡುವಂತೆ ಆದೇಶಿಸಿದ್ದಾರೆ ಎಂದರು.
30 ದಿನಗೊಳಗೆ ಕಾರ್ಮಿಕ ಇಲಾಖೆ ಆಯುಕ್ತರ ಬ್ಯಾಂಕ್ ಖಾತೆಗೆ ಠೇವಣಿ ಇಡಲು ಸೂಚಿಸಲಾಗಿದೆ. ವಿಫಲರಾದಲ್ಲಿ ವಸೂಲಾತಿಗೆ ಆದೇಶಿಸುವದಾಗಿ ಎಚ್ಚರಿಸಿದ್ದಾರೆ. ಸಿಂಧನೂರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಕೂಡಲೇ ಹಣವನ್ನು ಠೇವಣಿ ನೀಡುವ ಮೂಲಕ ಪಾವತಿಗೆ ಕ್ರಮವಹಿಸಬೇಕು. ಕಾರ್ಮಿಕ ಇಲಾಖೆ ಕಾರ್ಮಿಕರ ಪರವಾದ ತೀರ್ಪು ನೀಡಿರುವದು ಸ್ವಾಗತಾರ್ಹವಾಗಿದ್ದು, ಕಾರ್ಮಿಕರ ಹೋರಾಟಕ್ಕೆ ಸಂದ ಜಯವಾಗಿದೆ. ಪೌರಾಡಳಿತ ಸಚಿವರು, ನಿರ್ದೇಶಕರು ಸೂಕ್ತ ನಿರ್ದೇಶನ ನೀಡಿ ಅನ್ಯಾಯಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಲು ಕ್ರಮವಹಿಸಬೇಕು. ವಿಳಂಭವಾದಲ್ಲಿ ನ್ಯಾಯಾಂಗ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಜೀಜ ಜಹಾಗೀರದಾರ, ಅನಿಲ್, ಜಿಲಾನಿ, ಮೌನೇಶ, ಅಂಬರೇಷ, ಕರಿಯಪ್ಪ ಇದ್ದರು







