ರಾಯಚೂರು | ಆರೆಸ್ಸೆಸ್ ಪಥಚಲನದಲ್ಲಿ ಭಾಗವಹಿಸಿ ಅಮಾನತುಗೊಂಡ ಪಿಡಿಒರಿಂದ 14.38 ಲಕ್ಷ ಹಣ ವೆಚ್ಚ, ಅಧಿಕಾರ ದುರುಪಯೋಗ : ವಿಶ್ವನಾಥ ಬಲ್ಲಿದವ ಆರೋಪ

ರಾಯಚೂರು : ಆರೆಸ್ಸೆಸ್ ಪಥಚಲನದಲ್ಲಿ ಭಾಗವಹಿಸಿ ಅಮಾನತುಗೊಂಡ ಪಿಡಿಒ ಹಾಗೂ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಪ್ರವೀಣಕುಮಾರ ಕೆ.ಪಿ ಅವರು ಕರ್ತವ್ಯದಿಂದ ಬಿಡುಗಡೆಗೊಂಡರೂ 15ನೇ ಹಣಕಾಸು ಯೋಜನೆಯ ಅನುದಾನ ವಿವಿಧ ಕಾಮಗಾರಿಗಳಿಗೆ ಗಣದಿನ್ನಿ ಗ್ರಾಮ ಪಂಚಾಯತ್ ಹಾಗೂ ಹಿರೇಹಣಗಿ ಗ್ರಾಮ ಪಂಚಾಯಿತಿಯಿಂದ ಒಟ್ಟು 14.38 ಲಕ್ಷ ವೆಚ್ಚ ಮಾಡಿರುವುದು ಬಹಿರಂಗವಾಗಿದ್ದು ಕರ್ತವ್ಯ ಲೋಪದ ಜೊತೆಗೆ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಭೀಮ್ ಆರ್ಮಿ ಮುಖಂಡ ವಿಶ್ವನಾಥ ಬಲ್ಲಿದವ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒ ಆಗಿದ್ದ ಪ್ರವೀಣಕುಮಾರ ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಹುದ್ದೆಗೆ ನೇಮಕವಾಗುವ ಹಿನ್ನೆಲೆಯಲ್ಲಿ ಸಿರವಾರ ತಾಲೂಕಿನ ಗಣದಿನ್ನಿ ಹಾಗೂ ಹಿರೆಹಣಗಿ ಗ್ರಾಮ ಪಂಚಾಯತಿಯ ಸರ್ಕಾರಿ ಕರ್ತವ್ಯದಿಂದ 2023ರ ಜೂನ್ 15 ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಿರವಾರ ತಾಲೂಕು ಪಂಚಾಯತಿಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ, ಅವರ ಜಾಗಕ್ಕೆ ಬೇರೊಬ್ಬರು ನಿಯೋಜನೆಗೊಂಡ ಪಿಡಿಒಗೆ ಕಾರ್ಯಭಾರಿ ಹಸ್ತಾಂತರ ಮಾಡದೇ ನಿಯಮ ಬಾಹೀರವಾಗಿ 15ನೇ ಹಣಕಾಸು ಯೋಜನೆಯ ಅನುದಾನ ಅಂದರೆ 2023ರ ಜೂನ್ 25ರಿಂದ 30ರ ವರೆಗೆ ಗಣದಿನ್ನಿ ಗ್ರಾಮ ಪಂಚಾಯತಿಯಲ್ಲಿ 5,18,030ರೂ. ಮತ್ತು ಹಿರೆಹಣಗಿ ಗ್ರಾಮ ಪಂಚಾಯತಿಯಲ್ಲಿ 9,20,133 ರೂ. ಸೇರಿ ಎರಡು ಪಂಚಾಯತಿಯಲ್ಲಿ ಒಟ್ಟು 14,38,163 ರೂ. ವೆಚ್ಚ ಮಾಡಿದ್ದಾರೆ. ಇದು ಸಿರವಾರ ತಾಲೂಕು ಪಂಚಾಯತಿ ಇ.ಒ ಅವರು ಜಿಲ್ಲಾ ಪಂಚಾಯಿತಿಯ ಸಿಇಒ ಅವರಿಗೆ ನೀಡಿದ ವರದಿಯಲ್ಲಿ ಬಹಿರಂಗವಾಗಿದೆ ಎಂದು ತಿಳಿಸಿದರು.
ಪಿಡಿಒ ಸ್ಥಾನದಿಂದ ಬಿಡುಗಡೆ ಮಾಡಿದ ನಂತರ ಅಧಿಕಾರ ದುರುಪಯೋಗ ಪಡೆದುಕೊಂಡು ಈ ಅವ್ಯವಹಾರ ಮಾಡಿದ್ದು, 15ನೇ ಹಣಕಾಸು ಯೋಜನೆಯಡಿ ಲಿಂಗಸುಗೂರು ತಾಲೂಕಿನ ಒಂದೇ ಅಂಗಡಿಯಲ್ಲಿ ಪಂಪ್ ಸೆಟ್ ಖರೀದಿ, ಬೀದಿ ದೀಪಗಳ ಖರೀದಿ ಸೇರಿ ಇತರೆ ಖರ್ಚುಗಳ ವೆಚ್ಚ ಮಾಡಿದ್ದಾರೆ. ಲಿಂಗಸುಗೂರು ಶಾಸಕರ ಆಪ್ತ ಸಹಾಯಕರಾಗಿರುವ ಅವರು ಸಿರವಾರ ಬಿಟ್ಟು ಲಿಂಗಸುಗೂರು ತಾಲೂಕಿನ ಅಂಗಡಿಯಲ್ಲಿಯೇ ಸಾಮಾಗ್ರಿಗಳ ಖರೀದಿ ವೆಚ್ಚ ಮಾಡಿರುವುದರಿಂದ ಶಾಸಕರಿಗೆ ಅನುಕೂಲ ಮಾಡಲು ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಮಾನಪ್ಪ ವಜ್ಜಲ್ ಅವರೇ ನಿಮ್ಮನ್ನು ಶಾಸನ ಮಾಡುವ ಸ್ಥಾನದಲ್ಲಿ ಕೂರಿಸಿದ್ದಾರೆ. ನೀವು ಕಳ್ಳರನ್ನು ಪೋಷಣೆ ಮಾಡುತ್ತಾ ಇದ್ದೀರ, ಅದರಲ್ಲಿ ನಿಮಗೆ ಕಮಿಷನ್ ಇದೆಯಾ, ಶಾಸಕ ಸ್ಥಾನ ಬಳಸಿಕೊಂಡು ಇನ್ನೆಷ್ಟು ಭ್ರಷ್ಟಾಚಾರ ಎಸಗಿರಬಹುದು, ಜಿ.ಪಂ ಸಿಇಒ ಪಿಡಿಒ ಪ್ರವೀಣಕುಮಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಭೀಮ್ ಆರ್ಮಿಯಿಂದ ಜಿಲ್ಲಾ ಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಪ್ರವೀಣಕುಮಾರ, ಬಾಬಾ ಖಾನ್ , ದೀಪಕ್ ಭಂಡಾರಿ ಉಪಸ್ಥಿತರಿದ್ದರು.







