ರಾಯಚೂರು | ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಒ ಅಮಾನತು

ರಾಯಚೂರು : ಜಿಲ್ಲೆಯ ಲಿಂಗಸುಗೂರಿನಲ್ಲಿ ಈಚೆಗೆ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಒ ಹಾಗೂ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಪ್ರವೀಣ ಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡಿ ವಿಚಾರಣೆಯನ್ನು ಕಾಯ್ದಿರಿಸಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿ ಡಾ.ಅರುಂಧತಿ ಚಂದ್ರಶೇಖರ ಅವರು ಆದೇಶ ಹೊರಡಿಸಿದ್ದಾರೆ.
ಸಿರವಾರ ತಾಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರವೀಣ ಕುಮಾರ ಗಣವೇಶಧಾರಿಯಾಗಿ ಕೈಯಲ್ಲಿ ದೊಣ್ಣೆ ಹಿಡಿದು ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಅ.14ರಂದು ವಾರ್ತಾಭಾರತಿ ವೆಬ್ ಸೈಟ್ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಕರ್ನಾಟಕ ಸಿವಿಲ್ ಸೇವಾ (ನಡತೆ)ನಿಯಮ 2021ರ ನಿಯಮ 3 ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರರು ಕರ್ತವ್ಯದಲ್ಲಿ ನೀತಿ ನಿಷ್ಠೆ ಹೊಂದಿರಬೇಕು ಹಾಗೂ ರಾಜಕೀಯವಾಗಿ ತಟಸ್ಥರಾಗಿರಬೇಕು. ತನ್ನ ಕರ್ತವ್ಯ ನಿಷ್ಠೆಯ ವಿರುದ್ಧ ಕೆಲಸ ಮಾಡಿದ ಕಾರಣ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತು ಗೊಳಿಸಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.







