208 ಕಳ್ಳತನ ಪ್ರಕರಣ ಭೇದಿಸಿದ ರಾಯಚೂರು ಪೊಲೀಸರು : 4.02 ಕೋಟಿ ರೂ. ಮೌಲ್ಯದ ಸ್ವತ್ತು ಮಾಲಕರಿಗೆ ಹಸ್ತಾಂತರ

ರಾಯಚೂರು : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಆರೋಪಿಗಳಿಂದ ವಶಪಡಿಸಿಕೊಂಡ ಸುಮಾರು 4.02 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಮೂಲ ಮಾಲಕರಿಗೆ ಹಸ್ತಾಂತರಿಸಿದರು.
2026ರ ಜ.1ರಿಂದ ಜೂ.30ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 208 ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, 4,02,61,421 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
ದರೋಡೆ, ಸರಗಳ್ಳತನ, ಮನೆ ಕಳ್ಳತನ, ವಾಹನ ಕಳವು ಹಾಗೂ ಜಾನುವಾರು ಕಳವು ಸೇರಿದಂತೆ ವಿವಿಧ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದು, ಚಿನ್ನಾಭರಣ, ಬೆಳ್ಳಿಯಾಭರಣ, ನಗದು, ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳು, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಕಾಪರ್ ವೈರ್, ಬ್ಯಾಟರಿಗಳು ಸೇರಿದಂತೆ ವಿವಿಧ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಹರ್ಷ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನ್ಯಾಯಾಲಯದ ಅನುಮತಿ ಪಡೆದು ಸಂಬಂಧಪಟ್ಟ ದೂರುದಾರರು ಹಾಗೂ ವಾರಸುದಾರರಿಗೆ ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು.
24 ಗಂಟೆಯಲ್ಲೇ ಕಾರು ದರೋಡೆ ಪ್ರಕರಣ ಭೇದನೆ :
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಹರ್ಷ ಪಿ.ಎಸ್., ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 15.13 ಲಕ್ಷ ರೂ. ಮೌಲ್ಯದ ಕಾರು ದರೋಡೆ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಕಳುವಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾಪಲದಿನ್ನಿ, ಮಾನ್ವಿ, ಬಳಗಾನೂರು, ಸಿಂಧನೂರು, ಲಿಂಗಸುಗೂರು ಹಾಗೂ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗಳ ಅಧಿಕಾರಿಗಳು ಸಿಸಿ ಕ್ಯಾಮೆರಾ ದೃಶ್ಯಾವಳಿ, ಬೆರಳಚ್ಚು, ಟೋಲ್‌ಗೇಟ್ ಮಾಹಿತಿ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ತನಿಖೆಯ ನೆರವಿನಿಂದ ಹಲವು ಗಂಭೀರ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ ಎಂದರು.
ಸೈಬರ್ ಅಪರಾಧಗಳ ವಿರುದ್ಧವೂ ಪರಿಣಾಮಕಾರಿ ಕಾರ್ಯಾಚರಣೆ ನಡೆಸಲಾಗಿದ್ದು, 42.43 ಲಕ್ಷ ರೂ. ಗೂ ಅಧಿಕ ಹಣವನ್ನು ಸಂತ್ರಸ್ತರಿಗೆ ಮರಳಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ CEIR ಪೋರ್ಟಲ್ ಮೂಲಕ ಪತ್ತೆಯಾದ 77 ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಸಹ ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಆಸ್ತಿ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಬದ್ಧವಾಗಿದ್ದು, ಮುಂದೆಯೂ ಇದೇ ರೀತಿಯ ಪರಿಣಾಮಕಾರಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಶು ಗಿರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಾಂತವೀರ, ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ಉಮೇಶ್ ಕಾಂಬ್ಳೆ, ಪಿಎಸ್ಐ ಮಂಜುನಾಥ ಸೇರಿದಂತೆ ವಿವಿದ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.






