ರಾಯಚೂರು| ಪೋಲಿಯೋ ಲಸಿಕೆ ಟಾಸ್ಕ್ ಪೋರ್ಸ್ ಸಮಿತಿ ಸಭೆ

ರಾಯಚೂರು: ರಾಯಚೂರು ನಗರದಲ್ಲಿ ಪಲ್ಸ್ ಪೋಲಿಯೋ ಅಭಿಯಾನದಡಿ ಡಿ.21ರಿಂದ 24ರವರೆಗೆ ಐದು ವರ್ಷದೊಳಗಿನ 35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಡಿಸೆಂಬರ್ 16ರ ಮಂಗಳವಾರದಂದು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಜುಬಿನ್ ಮೊಹೊಪಾತ್ರ, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ನಗರ ಪ್ರದೇಶಗಳಲ್ಲಿ ಒಟ್ಟು 143 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. 9 ಟ್ರಾಂಜಿಟ್ ಹಾಗೂ 6 ಸಂಚಾರಿ (ಮೊಬೈಲ್) ತಂಡ ರಚಿಸಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು 286 ವ್ಯಾಕ್ಸಿನೆಟರ್ಸ್, 31 ಮೇಲ್ವಿಚಾರಕರಿದ್ದು, ರಾಯಚೂರು ನಗರದಲ್ಲಿ ಒಟ್ಟು 62,685 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್‌ಕುಮಾರ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಪರಿಸರ ಅಭಿಯಂತರರು ಜಯಪಾಲ್ ರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಬಿ.ಹೆಚ್.ಇ.ಓ, ಸರೋಜಾ ಕೆ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಸುರೇಶ್, ಕ್ಷೇತ್ರ ಲಸಿಕಾ ಮೇಲ್ವಿಚಾರಕ ಕೋಪ್ರೇಶ್, ಡಿಡಿಎಮ್ ಲೋಕೇಶ್ ಸೇರಿದಂತೆ ಪಾಲಿಕೆ ವಾಹನ ವಿಭಾಗದ ವೆಂಕಟೇಶ ಕುಲಕರ್ಣಿ ಹಾಗೂ ಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.







