Raichur | ರೈತರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರುವ ಸಂಶೋಧನೆಗಳಿಗೆ ಆದ್ಯತೆ ನೀಡಿ : ಡಾ.ಎಂ.ವಿ.ಧನಂಜಯ
18ನೇ ಸಂಸ್ಥಾಪನಾ ದಿನಾಚರಣೆ

ರಾಯಚೂರು: ಕೃಷಿ ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಾಗಿ ಉಳಿಯದೆ, ರೈತರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರುವ ಸಂಶೋಧನಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಸಲಹೆ ನೀಡಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ರವಿವಾರ ಆಯೋಜಿಸಿದ್ದ 18ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ, ನೀರಿನ ಕೊರತೆ, ಮಣ್ಣಿನ ಫಲವತ್ತತೆ ಕುಸಿತ, ಕೀಟ ಹಾಗೂ ರೋಗಗಳ ಬಾಧೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಂತಹ ಸಮಸ್ಯೆಗಳಿಗೆ ವೈಜ್ಞಾನಿಕ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ರೈತರು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರ ಮಕ್ಕಳಿಗೆ ಮದುವೆ ಸಂಬಂಧಗಳನ್ನು ಮಾಡಿಕೊಡಲು ಕೂಡ ಹಿಂಜರಿಯುವಂತಹ ಸಾಮಾಜಿಕ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರ ಪರಿಣಾಮವನ್ನೂ ರೈತರೇ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ಆಧುನಿಕ ಸಂಶೋಧನೆಗಳ ಮೂಲಕ ರೈತರಿಗೆ ನೆರವಾಗಬೇಕು ಎಂದರು.
ರಾಜ್ಯದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು, ರಾಷ್ಟ್ರೀಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಸಮನ್ವಯದ ತತ್ವದಡಿ ಕಾರ್ಯನಿರ್ವಹಿಸಬೇಕು. ಎಲ್ಲ ಸಂಸ್ಥೆಗಳು ಒಂದೇ ಸೂರಿನಡಿ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಂಶೋಧನೆಯ ಫಲಿತಾಂಶಗಳು ಮತ್ತು ತಂತ್ರಜ್ಞಾನಗಳು ರೈತರಿಗೆ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ವಿಶ್ವವಿದ್ಯಾಲಯಗಳು ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಸಂಶೋಧನೆಯ ಫಲಿತಾಂಶಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ ರೈತರ ಹೊಲಗಳಿಗೆ ತಲುಪಬೇಕು. ತಂತ್ರಜ್ಞಾನ, ತರಬೇತಿ ಹಾಗೂ ಸರ್ಕಾರದ ಯೋಜನೆಗಳನ್ನು ಸಮನ್ವಯಗೊಳಿಸಿದಾಗ ಮಾತ್ರ ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯ. ವಿಶ್ವವಿದ್ಯಾಲಯದ ಮಟ್ಟದಲ್ಲಿ ‘ಕೃಷಿ ಒನ್’ ಕಾರ್ಯಕ್ರಮವನ್ನು ಸ್ಥಾಪಿಸಿ, ಅದರಡಿ ರೈತರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳು ಲಭ್ಯವಾಗುವಂತೆ ಮಾಡಬೇಕು. ರೈತರ ಜಮೀನುಗಳಲ್ಲಿಯೇ ದೊಡ್ಡಮಟ್ಟದ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿ, ಅವುಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಕಾರ ನೀಡಬೇಕು. ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ ಹಾಗೂ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಗುರುರಾಜ ಸುಂಕದ ಮಾತನಾಡಿ, 1984ರಲ್ಲಿ ಆರಂಭವಾದ ಕೃಷಿ ಮಹಾವಿದ್ಯಾಲಯವು ಹಲವು ಹಿರಿಯ ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರ ಪರಿಶ್ರಮದ ಫಲವಾಗಿ 2008ರ ನವೆಂಬರ್ 22ರಂದು ಸ್ವತಂತ್ರ ಕೃಷಿ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತು ಎಂದು ಸ್ಮರಿಸಿದರು.
ವಿಶ್ವವಿದ್ಯಾಲಯದ ಬೆಳವಣಿಗೆಗೆ ದಿವಂಗತ ಡಾ. ಎ.ಎಸ್. ಹಾದಿಮನಿ, ಡಾ. ಎಸ್.ಎ. ಪಾಟೀಲ್, ಸಂಸ್ಥಾಪಕ ಕುಲಪತಿ ಡಾ. ಬಿ.ವಿ. ಪಾಟೀಲ್, ನಂತರದ ಕುಲಪತಿಗಳಾದ ಡಾ. ಪಿ.ಎಂ. ಸಾಲಿಮಠ, ಡಾ. ಕೆ.ಎನ್. ಕಟ್ಟಿಮನಿ ಹಾಗೂ ಡಾ. ಎಂ. ಹನುಮಂತಪ್ಪ ಸೇರಿದಂತೆ ಅನೇಕರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಪರಿಶ್ರಮದಿಂದ ವಿಶ್ವವಿದ್ಯಾಲಯವು ಇಂದು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ಹೊಂದಿರುವ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆರು ಮಹಾವಿದ್ಯಾಲಯಗಳು, 13 ಕೃಷಿ ಸಂಶೋಧನಾ ಕೇಂದ್ರಗಳು, ಏಳು ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಆರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು ‘ಹಿಂಗಾರು ಬರ ಸಲಹಾ ಘಟಕ’ಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಬರ ನಿರ್ವಹಣೆ, ನೀರಿನ ಸಂರಕ್ಷಣೆ, ಮೇವಿನ ಉತ್ಪಾದನೆ ಹಾಗೂ ಪರ್ಯಾಯ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಜೋಳ, ಮೆಕ್ಕೆಜೋಳ ಹಾಗೂ ಇತರ ಮೇವಿನ ಬೆಳೆಗಳನ್ನು ಉತ್ತೇಜಿಸಬೇಕು. ಹೈಡ್ರೋಪೋನಿಕ್ ತಂತ್ರಜ್ಞಾನ, ಅಜೋಲ್ಲಾ ಉತ್ಪಾದನೆ ಮತ್ತು ಮೇವಿನ ಸಂರಕ್ಷಣಾ ವಿಧಾನಗಳ ಕುರಿತು ರೈತರಿಗೆ ತರಬೇತಿ ನೀಡಬೇಕು. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಬರ ನಿರ್ವಹಣಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ರೈತರೂ ಕೂಡ ‘ಬರ ಜ್ಞಾನ ಒಕ್ಕೂಟ’ಗಳನ್ನು ಆರಂಭಿಸಿ, ಅವುಗಳ ಮೂಲಕ ಬರಗಾಲದ ಸಂದರ್ಭದಲ್ಲಿಯೂ ಕನಿಷ್ಠ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಮಲ್ಲೇಶ ಕೊಲಿಮಿ ಹಾಗೂ ರೇಣುಕಾ ಪಿರಂಗಿ ಉಪಸ್ಥಿತರಿದ್ದರು.
ರೇವಣಸಿದ್ದಪ್ಪ ಹಾಳಕಿಗೆ ಕೃಷಿರತ್ನ ಪ್ರಶಸ್ತಿ :
ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ರೇವಣಸಿದ್ದಪ್ಪ ಹಾಳಕಿ ಅವರು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಪ್ರಾಯೋಜಿತ ‘2026ರ ಕೃಷಿರತ್ನ ಪ್ರಶಸ್ತಿ ಹಾಗೂ ಚಿನ್ನದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಇದರೊಂದಿಗೆ ಅತ್ಯುತ್ತಮ ಶಿಕ್ಷಕ, ಸಂಶೋಧನಾ ವಿಜ್ಞಾನಿ, ವಿಸ್ತರಣಾ ವಿಜ್ಞಾನಿ, ಕ್ಷೇತ್ರ ಅಧೀಕ್ಷಕ, ಸೇವಾ ಸಿಬ್ಬಂದಿ, ಕ್ಷೇತ್ರ ಸಹಾಯಕ ಹಾಗೂ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿಗಳನ್ನು ಅರ್ಹರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿವೃಂದ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.






