ರಾಯಚೂರು | ಕಾರ್ಮಿಕರ ಹಿತರಕ್ಷಣೆ, ಗೌರವಯುತ ಜೀವನ ನಮ್ಮ ಸಂಘದ ಮೂಲ ಉದ್ದೇಶ : ಕೆ.ನಾಗಲಿಂಗಸ್ವಾಮಿ

ರಾಯಚೂರು: ತುಂಗಭದ್ರಾ ನೀರಾವರಿ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಕಾಯಂ ಕೆಲಸಗಾರರೆಂದು ಪರಿಗಣಿಸುವಂತೆ ಒತ್ತಾಯಿಸಿ ಹಾಗೂ ಕಾನೂನುಬಾಹಿರ ‘ಲೇ ಆಫ್’ ಕ್ರಮವನ್ನು ಪ್ರಶ್ನಿಸಿ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘ (AICCTU) ಪ್ರಾದೇಶಿಕ ಕಾರ್ಮಿಕ ಆಯುಕ್ತರ ಮುಂದೆ ಕಾನೂನು ಹೋರಾಟ ಆರಂಭಿಸಿದೆ.
ಈ ಕುರಿತು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ, ನಿರಂತರ ಸೇವೆಯಲ್ಲಿರುವ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು ಎಂಬ ಕಾರ್ಮಿಕ ಆಯುಕ್ತರ ಆದೇಶವು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯವಾಗಿದೆ. ಅಧಿಕಾರಿಗಳು ಈ ಆದೇಶ ಉಲ್ಲಂಘಿಸಿದರೆ ಮುನಿರಾಬಾದ್‌ನಿಂದ ಯರಮರಸ್‌ವರೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಯರಮರಸ್ ಮತ್ತು ಗಿಲ್ಲೇಸೂಗೂರು ಉಪವಿಭಾಗಗಳಲ್ಲಿ ಕಳೆದ 6 ತಿಂಗಳಿನಿಂದ ಹಾಗೂ ವಡ್ಡರಟ್ಟಿ ಉಪವಿಭಾಗದಲ್ಲಿ 7 ತಿಂಗಳಿನಿಂದ ಕಾರ್ಮಿಕರ ವೇತನ ಬಾಕಿ ಇದೆ. ಕನಿಷ್ಠ ವೇತನ ನೀಡದಿರುವುದು ಇಲಾಖೆಯ ವೈಫಲ್ಯವಾಗಿದೆ. ವೇತನ ಪಾವತಿ ಕಾಯ್ದೆಯಡಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಕಾರ್ಮಿಕ ಇಲಾಖೆಯು ಅಧಿಕಾರಿಗಳಿಗೆ ಎರಡನೇ ನೋಟಿಸ್ ಜಾರಿ ಮಾಡಿದೆ ಎಂದು ಅವರು ತಿಳಿಸಿದರು.
ಸಂಘದ ಹೋರಾಟದ ಫಲವಾಗಿ ಮುನಿರಾಬಾದ್ ಮತ್ತು ಯರಮರಸ್ ವೃತ್ತದ ಅಧಿಕಾರಿಗಳು ಕಾರ್ಮಿಕರಿಗೆ ಕೆಲಸ ಮುಂದುವರಿಸುವ ಕುರಿತು ವರದಿ ಸಲ್ಲಿಸಿದ್ದು, ನಿಗಮದಿಂದ ಅನುಮೋದನೆ ದೊರೆತಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಸಂಘಟನೆಯು ಕಾರ್ಮಿಕರ ಹಿತರಕ್ಷಣೆಗಾಗಿ ರಾಜಕೀಯೇತರವಾಗಿ ಶ್ರಮಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ, ಯರಮರಸ್ ವಿಭಾಗದ ಅಧ್ಯಕ್ಷ ಸಿದ್ದಪ್ಪಗೌಡ, ಸಿರಿವಾರ ವಿಭಾಗದ ಅಧ್ಯಕ್ಷ ರಾಜಮಹ್ಮದ್, ಮುಖಂಡರಾದ ಬಸನಗೌಡ ಕಲ್ಲೂರು, ಜಲೀಲ್ ಪಾಷಾ, ಗೌಸ್ ಮೋಹಿನುದ್ದೀನ್, ಗುರುಬಸವ, ಜಗದೀಶ್, ನಿಸಾರ್ ಅಹ್ಮದ್, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.







