ರಾಯಚೂರು | ಜೆಸ್ಕಾಂ ನೌಕರರ ಬಡ್ತಿ ವಿಳಂಬ ಖಂಡಿಸಿ ಪ್ರತಿಭಟನೆ

ರಾಯಚೂರು: ಜೆಸ್ಕಾಂ ವೃತ್ತ ಮಟ್ಟದಲ್ಲಿ 94 ನೌಕರರ ಬಡ್ತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ರಾಯಚೂರಿನಲ್ಲಿ 94 ನೌಕರರಿಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆಗೊಂಡು ಅಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿ ಮುಕ್ತಾಯಗೊಂಡಿದ್ದರೂ, ಇಲ್ಲಿಯವರೆಗೂ ಅಂತಿಮ ಜೇಷ್ಠತಾ ಪಟ್ಟಿ ಹೊರಡಿಸದೆ ಕೆಳ ಹಂತದ ನೌಕರರ ಬಡ್ತಿಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿದರು.
7 ದಿನಗಳೊಳಗಾಗಿ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಣೆ ಮತ್ತು ಬಡ್ತಿ ಪ್ರಕ್ರಿಯೆ ಮಾಡಬೇಕು. 12 ಬಿ ಅಡಿಯಲ್ಲಿ ಕಿರಿಯ ಅಭಿಯಂತರರ ಹುದ್ದೆಗೆ ಬಡ್ತಿ ನೀಡಬೇಕು, ಟಿ.ಎಲ್.ಎಮ್ ನೌಕರರಿಗೆ ಬಡ್ತಿ ನೀಡಬೇಕು. ಲೈನ್ ಮೆಕ್ಯಾನಿಕ್ ದರ್ಜೆ-1 ಮತ್ತು 2, ಸ್ಟೇಷನ್ ಮೆಕ್ಯಾನಿಕ್ ದರ್ಜೆ 2 ಮತ್ತು 1, ಲೈನ್ ಮ್ಯಾನ್ ಮತ್ತು ಸಹಾಯಕ ಲೈನ್ ಮ್ಯಾನ್ ಹುದ್ದೆಗಳಿಗೆ ಬಡ್ತಿ ನೀಡಬೇಕು. ಪವರ್ ಮ್ಯಾನ್, ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಬಡ್ತಿ ನೀಡಬೇಕು, ವೃತ್ತ ಮಟ್ಟದಲ್ಲಿ ಬಾಕಿ ಇರುವ ಹುದ್ದೆಗಳು ಬಡ್ತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆಎಲ್ ಗೋಪಿ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಚಿನ್ನಪ್ಪ, ಸಂಜೀವ್ ಕುಮಾರ್, ನರಸಪ್ಪ, ಶಿವಮೂರ್ತಿ, ಮಲ್ಲಣ್ಣ, ರಾಮಕೃಷ್ಣ, ಹನುಮಂತರಾಯ್, ಅಮರೇಶ, ಈರಣ್ಣ, ಮಲ್ಲಿಕಾ ಉಪಸ್ಥಿತರಿದ್ದರು.





