ರಾಯಚೂರು | ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಅಭ್ಯರ್ಥಿಗಳ ಬಂಧನ ವಿರೋಧಿಸಿ ಪ್ರತಿಭಟನೆ

ರಾಯಚೂರು: ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗಳಾದ ಜಿತೇಂದ್ರ ಪಾಸ್ವಾನ್ ಹಾಗೂ ಹಾಲಿ ಶಾಸಕ ಸತ್ಯದೇವ್ ರಾಮ್ ಅವರ ಬಂಧನ ಖಂಡನಾರ್ಹ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ಆಡಳಿತಾರೂಢ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಬಿಹಾರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಕೂಡಲೇ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗಳಾದ ಜಿತೇಂದ್ರ ಪಾಸ್ವಾನ್ ಮತ್ತು ದರೌಲಿ ಶಾಸಕ ಸತ್ಯದೇವ್ ರಾಮ್ ಅವರ ಬಂಧಿಸಲಾಗಿದೆ. ಇದು ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಫಲ ಆಡಳಿತದ ಕಾರಣ 'ಡಬಲ್-ಎಂಜಿನ್' ಸರ್ಕಾರದ ವಿರುದ್ಧ ಬಿಹಾರ ಜನತೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ಈ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದ ಬಿಜೆಪಿ-ಜೆಡಿ(ಯು) ಮೈತ್ರಿಕೂಟವು ಪ್ರಜಾತಂತ್ರದ ಧ್ವನಿಯನ್ನು ಹತ್ತಿಕ್ಕಲು ದಮನ-ಬೆದರಿಕೆ ಮೂಲಕ ಪೊಲೀಸ್ ಮತ್ತು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಇದ್ದರು. ದರ ಭಾಗವಾಗಿಯೇ ನಾಮಪತ್ರ ಸಲ್ಲಿಸಿದ ತಕ್ಷಣ ಕೇಂದ್ರದ ಹೊರಗೆ ಭೋರೆ ವಿಧಾನಸಭೆಯ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿ ಕಾಮೇಡ್ ಜಿತೇಂದ್ರ ಪಾಸ್ವಾನ್ ಮತ್ತು ದರೌಲಿಯ ಹಾಲಿ ಶಾಸಕ ಮತ್ತು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿ ಕಾಮೇಡ್ ಸತ್ಯದೇವ್ ರಾಮ್ ಅವರನ್ನು ಬಂಧಿಸುವ ಮೂಲಕ ರಾಜಕೀಯ ಪ್ರೇರಿತ ದೌರ್ಜನ್ಯವನ್ನು ನಡೆಸಲಾಗಿದೆ. ಈ ಹೇಡಿತನದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಜನರು 'ಡಬಲ್-ಎಂಜಿನ್' ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ದೂರಿದರು.
2013ರಲ್ಲಿ ದಲಿತ ಭೂಹೀನ ಕಾರ್ಮಿಕರು ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳಲು ನಡೆಸಿದ ಹೋರಾಟದ ಸಂದರ್ಭದಲ್ಲಿ ಸತ್ಯದೇವ್ ರಾಮ್ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ಹೂಡಿ ಜೈಲಿಗೆ ಹಾಕಲಾಗಿತ್ತು. ಸದಾ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ದುಡಿಯುವ ವರ್ಗದ ಪರವಾಗಿರುವ ಸತ್ಯದೇವ ಅವರು ಬಿಜೆಪಿ ಅಭ್ಯರ್ಥಿಯ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲದೇ ಬೋರೇ ಕ್ಷೇತ್ರದ ಅಭ್ಯರ್ಥಿ ಜಿತೇಂದ್ರ ಪಾಸ್ವಾನ್ ಅವರು ತಮ್ಮ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಗಳಿಸಿದ್ದು, ಅದನ್ನು ತಡೆಯಲು ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ದಬ್ಬಾಳಿಕೆ ನಡೆಸಿ, ಚುನಾವಣೆಗೆ ನಿಲ್ಲದಂತೆ ಅಡೆ-ತಡೆ ಮಾಡಲು ಹೊರಟಿದೆ. ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದ್ದು, ಮೈತ್ರಿ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವಾಗ, ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ 75 ಲಕ್ಷ ಮಹಿಳೆಯರ ಖಾತೆಗೆ 10 ಸಾವಿರ ರೂಪಾಯಿ ಪಾವತಿಸುವ ಯೋಜನೆಯನ್ನು ಪ್ರಧಾನಿಯವರು ಘೋಷಿಸಿದ್ದಾರೆ. ಅಭಿವೃದ್ಧಿಯನ್ನು ಕೈಗೊಳ್ಳದೇ ಜನವಿರೋಧಿಯಾಗಿ ಆಡಳಿತ ನಡೆಸಿದ ಮೈತ್ರಿ ಸರ್ಕಾರ ಜನರ ಕೋಪವನ್ನು ಎದುರಿಸಲು ಸಾಧ್ಯವಾಗದೇ ಅವರಿಗೆ ಆಮಿಷವೊಡ್ಡುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ದೂರಿದರು.
ಕರ್ನಾಟಕ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಮತಗಳ್ಳತನದ ವಿರುದ್ಧ ಪ್ರತಿಪಕ್ಷಗಳು ಆರೋಪಿಸಿದ್ದು, ಈ ಬಗ್ಗೆ ಸ್ಪಷ್ಟನೇ ನೀಡದೇ ಜಾರಿಕೊಳ್ಳುವ ಮೂಲಕ ಬಿಜೆಪಿ ಈಗ ಮತಗಳನ್ನು ಖರೀದಿಸಲು ಹೊರಟಿರುವುದು ನಾಚಿಕೆಗೇಡಿನತದ ಪರಮಾವಧಿಯಾಗಿದೆ. ಈ ಕೂಡಲೇ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗಳ ಮೇಲೆ ಬಿಹಾರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಮತ್ತು ಪ್ರತಿಪಕ್ಷಗಳ ಮೇಲೆ ದಾಳಿ ನಡೆಸುವ ಆಡಳಿತಾರೂಢ ಮೈತ್ರಿ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರ್ದಾರ್, ಮುಹಮ್ಮದ್ ಅನೀಸ್ ಅಬಕಾರಿ, ಜಿಲಾನಿ ಯರಗೇರಾ, ನರಸಿಂಹಲು, ನಾಗಣ್ಣ ನಾಯಕ್, ರಮೇಶ್, ಮಹೇಶ್, ಮೊಹಮ್ಮದ್ ಗೌಸ್, ತಾಯಪ್ಪ ಚಂದ್ರ ಬಂಡ ಇದ್ದರು.







