ರಾಯಚೂರು | ಸಹಕಾರಿ ಸಂಘಗಳಿಗೆ ಸರ್ಕಾರಿ ಶಾಲೆಗಳಲ್ಲಿ ಹಣ್ಣು, ತರಕಾರಿ ಸರಬರಾಜಿಗೆ ವಿರೋಧ; ಜಿ.ಪಂ ಅಧಿಕಾರಿಗಳ ವಿರುದ್ದ ಪ್ರತಿಭಟನೆ

ರಾಯಚೂರು: ಸರ್ಕಾರಿ ಶಾಲೆಗಳಿಗೆ ತರಕಾರಿ ಮತ್ತು ಹಣ್ಣುಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಸ್ವ-ಸಹಾಯ ಗುಂಪುಗಳಿಗೆ ನೀಡುವ ಜಿಲ್ಲಾ ಪಂಚಾಯತ್ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಮಾಯಿಸಿದ ನೌಕರರು, ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾ ಪಂಚಾಯತ್ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿರುವ ನೌಕರರು ಈವರೆಗೂ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಊಟ ನೀಡುವಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಮುಖ್ಯ ಅಡುಗೆಯವರೇ ಖುದ್ದಾಗಿ ತಾಜಾ ತರಕಾರಿಗಳನ್ನು ಖರೀದಿಸಿ ಅಡುಗೆ ಮಾಡುತ್ತಿದ್ದಾರೆ. ನೌಕರರೇ ತಮ್ಮ ಹಣದಿಂದ ತರಕಾರಿ ಖರೀದಿಸಿ ನಂತರ ಎಸ್‍ಡಿಎಂಸಿ ಖಾತೆಯಿಂದ ಹಣ ಪಡೆಯುವ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ. ಹೀಗಿರುವಾಗ ಹೊಸದಾಗಿ ಸ್ವ-ಸಹಾಯ ಗುಂಪುಗಳಿಗೆ ಈ ಜವಾಬ್ದಾರಿ ನೀಡುವ ಅಗತ್ಯವಿಲ್ಲ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಬಿಸಿಯೂಟ ನೌಕರರ ಸಾಮರ್ಥ್ಯ ಮತ್ತು ಕಾಳಜಿಯನ್ನು ಪರಿಗಣಿಸದೆ, ಜಿಲ್ಲಾ ಪಂಚಾಯತ್ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ. ಇದು ಬಿಸಿಯೂಟ ನೌಕರರಿಗೆ ಮಾಡುವ ಅನ್ಯಾಯವಾಗಿದೆ. ಸರ್ಕಾರವು ಹಂತ ಹಂತವಾಗಿ ಈ ಯೋಜನೆಯನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ನೌಕರರು ಆಪಾದಿಸಿದರು.
ಎಸ್‍ಡಿಎಂಸಿ ಖಾತೆಯಿಂದ ಬಿಸಿಯೂಟ ನೌಕರರನ್ನು ದೂರವಿಡುವ ಸರ್ಕಾರದ ನೌಕರ ವಿರೋಧಿ ನೀತಿಯನ್ನು ಕೈಬಿಡಬೇಕು ಮತ್ತು ಹಣ್ಣು-ತರಕಾರಿ ಸರಬರಾಜು ಮಾಡುವ ಜವಾಬ್ದಾರಿಯನ್ನು ಮೊದಲಿನಂತೆಯೇ ಅಡುಗೆ ನೌಕರರಿಗೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮರಿಯಮ್ಮ, ಖಜಾಂಜಿ ಮುಹಮ್ಮದ್ ಹನೀಫ್, ಡಿಎಸ್.ಶರಣಬಸವ, ಕೆ.ಜಿ.ವೀರೇಶ ಸೇರಿದಂತೆ ಅನೇಕರು ಇದ್ದರು.







