ರಾಯಚೂರು | ಮುಂಗಾರು ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಆ.11ರಿಂದ ಫ್ರೀಡಂ ಪಾರ್ಕ್ ನಲ್ಲಿ ಧರಣಿ

ರಾಯಚೂರು: ಮುಂಗಾರು ಅಧಿವೇಶನದಲ್ಲಿಯೇ ನ್ಯಾ.ನಾಗಮೋಹನದಾಸ್ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಆ.11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಧರಣಿ ಆಯೋಜಿಸಿದ್ದು, ಸಮುದಾಯದ ಎಲ್ಲಾ ಮುಖಂಡರು, ಒಳ ಮೀಸಲಾತಿ ಹೋರಾಟಗಾರರು ಭಾಗವಹಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಎಸ್.ಮಾರೆಪ್ಪ ಹೇಳಿದರು.
ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನ್ಯಾ.ನಾಗಮೋಹನದಾಸ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಸರ್ಕಾರ ಪಡೆದು ವಿಶೇಷ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳುತ್ತಿದೆ. ಸರ್ಕಾರದ ವಿಳಂಬ ಧೋರಣೆಗೆ ಅವಕಾಶ ನೀಡದೇ ಅನುಮೋದನೆ ನೀಡಿ ಇದೇ ಅಧಿವೇಶನದಲ್ಲಿ ಅಂಗೀಕಾರಗೊಳಿಸಬೇಕು. ಇಲ್ಲದೇ ಹೊದಲ್ಲಿ ರಾಜ್ಯದಲ್ಲಿ ಯಾವ ಸಚಿವರು ಪ್ರವಾಸ ಮಾಡದಂತೆ ತಡೆಯುವ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಮುಖ್ಯಮಂತ್ರಿಗಳು ರಾಜಕೀಯ ಪ್ರಭಾವವನ್ನು ಪರಿಗಣಿಸದೇ ತೆಲಂಗಾಣದ ಮುಖ್ಯಮಂತ್ರಿ ಕೈಗೊಂಡಿರುವ ನಿರ್ಧಾರವನ್ನು ರಾಜ್ಯದಲ್ಲಿಯೂ ಪ್ರದರ್ಶಿಸಬೇಕಿದೆ. ಆ.11 ರಿಂದ 22 ವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಸದನದಲ್ಲಿ ಮಂಡಿಸಿ ಅಂಗೀಕಾರಗೊಳಿಸದೇ ಹೋದರೆ ರಾಜ್ಯದಾಧ್ಯಂತ ಗಂಭೀರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹೇಮರಾಜ ಅಸ್ಕಿಹಾಳ, ಆಂಜಿನೇಯ್ಯ ಉಟ್ಕೂರು, ನರಸಿಂಹಲು ಮರ್ಚಟ್ಟಾಳ, ಶ್ರೀನಿವಾಸ ಕೊಪ್ಪರ, ಆಂಜನೇಯ ಕುರುಬದೊಡ್ಡಿ, ತಾಯಪ್ಪ ಗಧಾರ ಗೋಷ್ಠಿಯಲ್ಲಿ ಇದ್ದರು.







