Raichur | ಮಾಸಾಶನ ಕಡಿತ ಖಂಡಿಸಿ ಅಂಗವಿಕಲರ ಪ್ರತಿಭಟನೆ

ರಾಯಚೂರು: ಅಂಗವಿಕಲರು, ವೃದ್ಧರು ಹಾಗೂ ವಿಧವೆಯರ ಮಾಸಾಶನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ (ರಿ.) ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಗೂಳಪ್ಪ, ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನಕ್ಕೆ ಸರ್ಕಾರ ವಾರ್ಷಿಕ 32 ಸಾವಿರ ರೂ. ಆದಾಯ ಮಿತಿ ನಿಗದಿಪಡಿಸಿರುವುದು ಅವೈಜ್ಞಾನಿಕ ಹಾಗೂ ಬಡವಿರೋಧಿ ಕ್ರಮವಾಗಿದೆ. ಈ ಕಾರಣದಿಂದ ರಾಜ್ಯದ ಸಾವಿರಾರು ಅಂಗವಿಕಲರು, ವೃದ್ಧರು ಹಾಗೂ ವಿಧವೆಯರ ಮಾಸಾಶನ ಸ್ಥಗಿತಗೊಂಡಿರುವುದು ಖಂಡನೀಯ ಎಂದು ಹೇಳಿದರು.
ಪ್ರಸ್ತುತ ಬೆಲೆ ಏರಿಕೆಯ ಸಂದರ್ಭದಲ್ಲಿ ತಿಂಗಳಿಗೆ 2,700 ರೂ. ಕ್ಕಿಂತ ಕಡಿಮೆ ಆದಾಯವನ್ನು ಕುಟುಂಬದ ಆದಾಯ ಮಿತಿಯನ್ನಾಗಿ ಪರಿಗಣಿಸಿರುವುದು ವಾಸ್ತವಿಕತೆಗೆ ದೂರವಾಗಿದೆ. ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 1.20 ಲಕ್ಷ ರೂ. ಆದಾಯ ಮಿತಿ ಅನ್ವಯವಾಗಿರುವಾಗ, ಮಾಸಾಶನಕ್ಕೆ ಮಾತ್ರ 32 ಸಾವಿರ ರೂ. ಮಿತಿ ನಿಗದಿಪಡಿಸಿರುವುದು ತಾರತಮ್ಯವಾಗಿದೆ ಎಂದು ಆರೋಪಿಸಿದರು.
ಮಾಸಾಶನವು ಅಂಗವಿಕಲರು, ವೃದ್ಧರು ಹಾಗೂ ವಿಧವೆಯರ ಔಷಧಿ, ಚಿಕಿತ್ಸೆ, ಆಹಾರ ಮತ್ತು ದೈನಂದಿನ ಬದುಕಿನ ಪ್ರಮುಖ ಆಧಾರವಾಗಿದೆ. ಅದನ್ನು ಸ್ಥಗಿತಗೊಳಿಸಿರುವುದರಿಂದ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇತರರನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚು ವಾಸ್ತವಿಕ ಆದಾಯ ಮಿತಿ ಜಾರಿಯಲ್ಲಿದ್ದು, ಕರ್ನಾಟಕ ಸರ್ಕಾರವೂ ಮಾನವೀಯ ದೃಷ್ಟಿಕೋನದಿಂದ ತನ್ನ ನೀತಿಯನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯು 32 ಸಾವಿರ ರೂ. ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಿ ಬಿಪಿಎಲ್ ಮಾನದಂಡವಾದ 1.20 ಲಕ್ಷ ರೂ. ಆದಾಯ ಮಿತಿಯನ್ನು ಅನ್ವಯಿಸಬೇಕು. ಸ್ಥಗಿತಗೊಂಡಿರುವ ಅಂಗವಿಕಲರ, ವೃದ್ಧಾಪ್ಯ ಹಾಗೂ ವಿಧವಾ ವೇತನವನ್ನು ಕೂಡಲೇ ಪುನರಾರಂಭಿಸಬೇಕು. 40ರಿಂದ 74 ಶೇಕಡಾ ಅಂಗವೈಕಲ್ಯ ಹೊಂದಿದವರಿಗೆ ಮಾಸಿಕ 3,000 ರೂ. ಹಾಗೂ 75 ಶೇಕಡಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿದವರಿಗೆ 5,000 ರೂ. ಜೀವನ ಭತ್ಯೆ ನೀಡಬೇಕು ಎಂದು ಆಗ್ರಹಿಸಿತು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.






