ರಾಯಚೂರು | ಬಹುಭಾಷ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಯಿಂದ ಪ್ರತಿಭಟನೆ

ರಾಯಚೂರು : ಬಹುಭಾಷ ನಟ ಕಮಲ್ ಹಾಸನ್ ಅವರು ಕಾರ್ಯಕ್ರಮದಲ್ಲಿ ಮಾತನಾಡುವಾಗ ಕನ್ನಡ ಭಾಷೆ ತಮಿಳು ಭಾಷೆಯಿಂದ ಬಂದಿದೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಮಲ್ ಹಾಸನ್ ನಟನಾಗಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ನಟನ ಮಾತಿನಿಂದ ಕನ್ನಡಿಗರು, ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ ಎಂದು ಎಂದು ಕಮಲ್ ಹಾಸನ್ ಅವರ ಭಾವಚಿತ್ರಕ್ಕೆ ಬೂಟ್‌ನಿಂದ ಹೊಡೆದು ಆಕ್ರೋಶ ಹೊರ ಹಾಕಿದರು.
ತಕ್ಷಣ ತಮ್ಮ ತಪ್ಪನ್ನ ತಿದ್ದುಕೊಂಡು ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕನ್ನಡ ಪರ ಸಂಘಟನೆ ಮುಖಂಡ ಬಸವರಾಜ ಕಳಸ ಮಾತನಾಡಿ, ಬೆಂಗಳೂರಿಗೆ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಕಮಲ್ ಹಾಸನ್ ಅವರು ತಮಿಳ್‌ನಿಂದ ಕನ್ನಡ ಹುಟ್ಟಿಕೊಂಡಿದೆ ಎಂದು ಮಾತನಾಡಿದ್ದು, ಅಲ್ಲಿಯೇ ಇದ್ದ ನಟ ಶಿವರಾಜ್ ಕುಮಾರ ಅವರು ಖಂಡಿಸಬೇಕಿತ್ತು ಆದರೆ ಮೌನ ವಹಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಕನ್ನಡ ಚಲನಚಿತ್ರ ಮಂಡಳಿಗೆ ಈ ಬಗ್ಗೆ ದೂರು ನೀಡಲಾಗುವುದು, ಅವರ ವಿರುದ್ಧ ಕ್ರಮ ವಹಿಸಬೇಕು, ಭಾಷಾ ವಿರೋಧಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್, ಕೆ.ಇ.ಕುಮಾರ, ಬಷೀರ್ ಅಹಮದ್ ಹೊಸಮನಿ, ಸರೋಜಾ, ಜಗದೀಶ ಪಾಟೀಲ್ ವಿಶ್ವನಾಥ ಪಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.







