Raichur | ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವಧನ ನೀಡಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ 1,500 ರೂ. ಗೌರವಧನ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಗೆ ತಕ್ಕಂತೆ ಗೌರವಧನ ಹೆಚ್ಚಿಸದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಬೇಕು. ಮೊಬೈಲ್ ಹಾಗೂ ಆ್ಯಪ್ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವವರೆಗೆ ಸಮಸ್ತ ಆ್ಯಪ್‌ನಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಬಾರದು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಮಾರ್ಗಸೂಚಿಗಳ ಪ್ರಕಾರ, ನಿಕ್ಷಯ್ ಆ್ಯಪ್‌ನಲ್ಲಿ ಕೆಲಸ ಮಾಡುವುದು ಆಶಾ ಕಾರ್ಯಕರ್ತೆಯರ ಜವಾಬ್ದಾರಿಯಲ್ಲ. ಆದ್ದರಿಂದ ಈ ಕೆಲಸ ಮಾಡುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಎಲ್ಲ ಗೌರವಧನ ಹಾಗೂ ಪ್ರೋತ್ಸಾಹಧನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲಾಖೆಯ ಆದೇಶದಂತೆ ಮಾಸಿಕ 5,000 ರೂ. ಗೌರವಧನ, 2,000 ರೂ. ಮಾಸಿಕ ಪ್ರೋತ್ಸಾಹಧನ ಹಾಗೂ 1,000 ರೂ. ಟಿಬಿಐ ಮೊತ್ತವನ್ನು ಯಾವುದೇ ಕಡಿತವಿಲ್ಲದೆ ಪೂರ್ಣವಾಗಿ ಪಾವತಿಸಬೇಕು. ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪಾವತಿ ವಿವರಗಳು ಹಾಗೂ ಬಿಡುಗಡೆ ಆದೇಶದ ಪ್ರತಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕಳೆದ ಒಂದು ವರ್ಷದಲ್ಲಿ ಪಾವತಿಸಿರುವ ಗೌರವಧನ ಹಾಗೂ ಎಂಸಿಟಿಎಸ್, ನಾನ್-ಎಂಸಿಟಿಎಸ್, ಟಿಬಿಐ ಸೇರಿದಂತೆ ವಿವಿಧ ಪ್ರೋತ್ಸಾಹಧನಗಳ ಸಂಪೂರ್ಣ ವಿವರಗಳ ಸಾಫ್ಟ್‌ಕಾಪಿಯನ್ನು ಆಶಾ ಕಾರ್ಯಕರ್ತೆಯರ ಸಂಘಕ್ಕೆ ಒದಗಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಅಥವಾ ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ಪಾವತಿಸಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷೆ ಗೌರಮ್ಮ ಹೊಸಮನಿ, ಮಹೇಶ್, ಅಣ್ಣಪ್ಪ ಶಿರಶ್ಯಾಡ್, ಈರಮ್ಮ ದೇವದುರ್ಗ, ಶೋಭಾ, ಪ್ರಭಾವತಿ, ದೇವು ಮಸ್ಕಿ ಹಾಗೂ ಮಂಜುಳಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.






