ರಾಯಚೂರು | ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು : ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವುದು, ಜಿಲ್ಲಾ ಮಟ್ಟದ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವನ್ನು ರಚಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಎಐಯುಟಿಸಿ ನೇತೃತ್ವದಲ್ಲಿ ಸೋಮವಾರ ರಾಯಚೂರಿನಲ್ಲಿ ಪ್ರತಿಭಟನೆ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವನದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಕೌಶಲ್ಯರಹಿತ ಕಾರ್ಮಿಕರಿಗೆ ಕನಿಷ್ಠ ವೇತನ 35,950 ರೂ. ನಿಗದಿಪಡಿಸಬೇಕು. ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳ ಕುರಿತ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಿ, ಸರ್ಕಾರಿ ಆದೇಶವಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆಗಳನ್ನು ಸ್ಥಾಪಿಸಲು, ಪಿಎಫ್ ಮತ್ತು ಇಎಸ್‌ಐ ಅರ್ಹ ವೇತನ ಮಿತಿಯನ್ನು ಹೆಚ್ಚಿಸಿ ಎಲ್ಲ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಆಗ್ರಹಿಸಿದರು. 2017ರ ನಂತರ ಆರಂಭವಾದ ಎಲ್ಲಾ ವಸತಿ ಶಾಲೆಗಳು ಮತ್ತು ಕಾಲೇಜುಗಳಿಗೆ ಅಡುಗೆ ಸಿಬ್ಬಂದಿ ನೇಮಕ ಮಾಡಬೇಕೆಂದು ಬೇಡಿಕೆ ಮಂಡಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಎಸ್.ವೀರೇಶ್, ಜಿಲ್ಲಾಧ್ಯಕ್ಷ ತಿರುಮಲರಾವ್, ಉಪಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಚೀಕಲಪರ್ವಿ, ಸಲೀಮ್, ಕರಿಲಿಂಗ, ವೆಂಕಯ್ಯ, ಗಾಯತ್ರಿ, ಹುಲಿಗೆಪ್ಪ, ನಾಗರಾಜ, ಹನುಮರೆಡ್ಡಿ, ಮಹೇಶ್ ದೇವದುರ್ಗ ಸೇರಿದಂತೆ ಅನೇಕ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.







