Raichur | ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು: ಪ್ರಾಥಮಿಕ, ಪದವಿಧರ, ಪ್ರೌಢಶಾಲೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್ (ಎಐಡಿವೈಓ) ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಐಡಿವೈಓ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಮೂರು ವರ್ಷವಾದರೂ ಒಂದೇ ಒಂದು ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ” ಎಂದು ದೂರಿದರು.
“ಶಿಕ್ಷಣ ಸಚಿವರು ಪದೇಪದೇ 10 ಸಾವಿರ, 15 ಸಾವಿರ, 20 ಸಾವಿರ ಶಿಕ್ಷಕರ ನೇಮಕಾತಿ ಮಾಡುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ ಅಧಿಸೂಚನೆ ಮಾತ್ರ ಹೊರಡಿಸಿಲ್ಲ. ‘ಅತಿ ಶೀಘ್ರ’ ಎಂಬ ಪದಕ್ಕೇ ಅರ್ಥ ಉಳಿದಿಲ್ಲ,” ಎಂದು ಟೀಕಿಸಿದರು.
ರಾಜ್ಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 79,694 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸಣ್ಣ ಶಾಲೆಗಳನ್ನು ವಿಲೀನಗೊಳಿಸುವ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯಿಂದ ಶಿಕ್ಷಕರ ಹುದ್ದೆಗಳು ನಾಶವಾಗುವ ಭೀತಿ ಎದುರಾಗಿದೆ. ಇದರಿಂದ ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೆಕಲ್ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಗಂಭೀರ ಕೊರತೆ ಇದೆ. ಒಟ್ಟು 22,595 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರಲ್ಲಿ 18,317 ಪ್ರಾಥಮಿಕ ಹಾಗೂ 4,278 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಾಗಿವೆ,” ಎಂದು ಹೇಳಿದರು.
“ರಾಯಚೂರು ಜಿಲ್ಲೆಯಲ್ಲಿ ಮಾತ್ರವೇ 5,624 ಶಿಕ್ಷಕರ ಕೊರತೆ ಇದೆ. ದೇವದುರ್ಗ ತಾಲೂಕಿನಲ್ಲಿ 105 ಶೂನ್ಯ ಶಿಕ್ಷಕ ಶಾಲೆಗಳಿದ್ದು, 266 ಏಕೋಪಾಧ್ಯಾಯ ಶಾಲೆಗಳಿವೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಣ, ಚಿತ್ರಕಲೆ, ಸಂಗೀತ ಹಾಗೂ ರಂಗಕಲಾ ಶಿಕ್ಷಕರ ನೇಮಕಾತಿ ಕೂಡ ತಕ್ಷಣ ಕೈಗೊಳ್ಳಬೇಕು. ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆ ನಡೆಸಬೇಕು ಹಾಗೂ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ಒಂದು ಬಾರಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಪ್ಪ ಅಸ್ಕಿಹಾಳ್, ವಿನೋದ್ ಕುಮಾರ್, ವೆಂಕಟೇಶ್, ಕಾಶಿನಾಥ್ ಎಂ ಗಿಲೇರಿ, ಭೀಮರೆಡ್ಡಿ ನೆಲಹಾಳ್, ಹನುಮಂತ ಕಲ್ಲೂರು, ಬಸವರಾಜ್, ಮಂಜುನಾಥ್, ಶಿವಕುಮಾರ್, ಸಂತೋಷ್ ಸಾಗರ್, ಶರಣಬಸವ, ಶಿವಕುಮಾರ್ ಲಕ್ಕಮ ದಿನ್ನಿ, ಅಮೀರ್ ಬಹದ್ದೂರ್, ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಸರೋಜಾ ಗೋನವಾರ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಲಕ್ಷ್ಮಣ್ ಅವರು ಬೆಂಬಲಿಸಿ ಮಾತನಾಡಿದರು. ಶಿಕ್ಷಕ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.






