ರಾಯಚೂರು | ಮಾಜಿ ದೇವದಾಸಿಯರಿಗೆ 3 ಸಾವಿರ ರೂ. ಪಿಂಚಣಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು : ಬಜೆಟ್ ನಲ್ಲಿ ದೇವದಾಸಿ ವಿಮುಕ್ತ ಮಹಿಳೆಯರಿಗೆ ಮಾಸಿಕ ಪಿಂಚಣಿಯನ್ನು (ಸಹಾಯಧನ) 3,000 ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ನಗರದ ತಹಶೀಲ್ದಾರರ ಕಚೇರಿ ಎದುರು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯಿಂದ ಇಂದು ಪ್ರತಿಭಟನೆ ಮಾಡಲಾಯಿತು.
ಮಹಿಳಾ ಅಭಿವೃದ್ಧಿ ನಿಗಮವು ಎಲ್ಲ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗೆ ಕ್ರಮವಹಿಸಿದೆ. ಅದು ಸ್ವಾಗತಾರ್ಹ. ಆದರೆ, ಅದನ್ನು ಆನ್ ಲೈನ್ ನಲ್ಲಿ ಮತ್ತು ಅವರಿರುವಲ್ಲಿಗೆ ಮಹಿಳೆಯರು ಕುಟುಂಬ ಸಮೇತ ತೆರಳಿ ನೊಂದಾಯಿಸಬೇಕೆಂದಿದೆ. ಇದು ಕಷ್ಟದಾಯಕ ಹಾಗು ಭ್ರಷ್ಟಾಚಾರಕ್ಕೆ ಮತ್ತು ನಿಜ ಫಲಾನುಭವಿಗಳಲ್ಲದವರು ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಆದ್ದರಿಂದ ಇದನ್ನು ತಡೆದು ಈ ಹಿಂದಿನಂತೆ ಅಂಗನವಾಡಿ ಕೇಂದ್ರಗಳ ಮೂಲಕ ಗಣತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ವಸತಿಗಾಗಿ ಉಚಿತ ನಿವೇಶನದ ಜೊತೆಗೆ ರಾಜೀವ್ ಗಾಂಧಿ ವಸತಿ ಯೋಜನೆಗೆ ಜೋಡಿಸಿ ಮನೆಯನ್ನು ಕಟ್ಟಿಸಬೇಕು. ದುರ್ಬಲ ಮಹಿಳೆಯರಿಗೆ ಅವರ ಪಾಲಿನ ವಂತಿಗೆ ನೀಡಲು ಸಾದ್ಯವಾಗದಿರುವುದುರಿಂದ ಸರ್ಕಾರವೇ ವಂತಿಗೆ ಹಣ ಪಾವತಿಸಬೇಕು. ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬದ ಸದಸ್ಯರಿಗೆ ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸಬೇಕು ಎಂದು ಆಗ್ರಹಿಸಿದರು.
ರಾಯಚೂರು ತಾಲೂಕಿನ ಮಾಜಿ ದೇವದಾಸಿ ಮಹಿಳೆಯರಿಗೆ ಕಳೆದ ನಾಲ್ಕು ವರ್ಷಗಳಿಂದ ಪುನರ್ವಸತಿ ಕಲ್ಪಿಸಲು ಮನೆಗಳ ನಿರ್ಮಾಣ ಕಾರ್ಯ ಅತ್ಯಂತ ನಿಧಾನಗತಿ ನಡೆಯುತ್ತಿದ್ದು, ಕೂಡಲೇ ಕಾಮಗಾರಿಯನ್ನು ತೀವ್ರಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷೆ ಎಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವೀರೇಶ, ತಾಯಮ್ಮ, ರೇಣುಕಮ್ಮ, ಮುತ್ತಮ್ಮ ಉಪಸ್ಥಿತರಿದ್ದರು.







