Raichur | ಭೂಮಾನಂದ ಕೊಲೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು: ದೇವದುರ್ಗ ತಾಲ್ಲೂಕಿನ ಹದ್ದಿನಾಳ ಗ್ರಾಮದ ದಲಿತ ಯುವಕ ಭೂಮಾನಂದನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಭೂಮಾನಂದನನ್ನು ದುಷ್ಕರ್ಮಿಗಳು ಜನರ ಮುಂದೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಕೃತ್ಯ ಪೂರ್ವಯೋಜಿತವಾಗಿದ್ದು, ಹಂತಕರು ಸ್ಥಳದಲ್ಲಿದ್ದ ಕೆಲವು ಅಂಗಡಿ ಮಾಲೀಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಆಯುಧಗಳನ್ನು ಅಂಗಡಿಗಳಲ್ಲಿ ಬಚ್ಚಿಟ್ಟು ಹೊಂಚು ಹಾಕಿದ್ದರು ಎಂದು ಆರೋಪಿಸಿದರು.
ಭೂಮಾನಂದ ಸ್ಥಳಕ್ಕೆ ಬರುತ್ತಿದ್ದಂತೆಯೇ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಅಲ್ಲದೆ, ಘಟನೆಯ ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೊಲೆ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಹತ್ಯೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಕುಟುಂಬದ ಸದಸ್ಯರಿಗೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಸಾಸಲಮರಿ, ರಾಜು ಬೊಮ್ಮನಾಳ, ಅಶೋಕ ನಂಜಲದಿನ್ನಿ, ಎಂ.ಮನೋಹರ್ ಸಿರವಾರ, ಮೌನೇಶ ಗಾಣದಾಳ, ದುರುಗಪ್ಪ ಡಬ್ಬೇರ ಮಡಗು, ಹುಲುಗಪ್ಪ ಕುಣೆ ಕೆಲ್ಲೂರು, ಜಮದಗ್ನಿ ಗೊನಾಳ, ನಿರುಪಾದಿ, ಯಂಕೋಬ, ಈರಪ್ಪ, ಭೀಮಣ್ಣ, ಮಾರೆಪ್ಪ, ರಾಜಪ್ಪ ಜಂಬಣ್ಣ, ವಿಜಯ, ರಾಮಣ್ಣ ಇದ್ದರು.






