Raichur | 371(ಜೆ) ಅನುಷ್ಠಾನ ಪ್ರಾಧಿಕಾರ ರಚನೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು, ಸೆ. 8: ಸಂವಿಧಾನದ 371(ಜೆ) ವಿಧಿಯ ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಪ್ರತ್ಯೇಕ ಅನುಷ್ಠಾನ ಪ್ರಾಧಿಕಾರ ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕಲ್ಯಾಣ ಕರ್ನಾಟಕ ಭಾಗದಲ್ಲಿ ದಶಕಗಳಿಂದ ಖಾಲಿ ಇರುವ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಎಲ್ಲಾ ಖಾಲಿ ಹುದ್ದೆಗಳಿಗೂ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ನಡೆಸಬೇಕು ಎಂದು ಆಗ್ರಹಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕುವಂತೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಕೆಕೆಆರ್‌ಡಿಬಿ ಅನುದಾನದ ಸಮರ್ಪಕ ಬಳಕೆಗೆ ಮುಂದಿನ ಹತ್ತು ವರ್ಷಗಳ ಸಮಗ್ರ ಕಾರ್ಯನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೆಕೆಆರ್‌ಡಿಬಿ ಅನುದಾನ ಬಳಕೆಯಲ್ಲಿರುವ ಕಠಿಣ ನಿಯಮಾವಳಿಗಳನ್ನು ಸರಳಗೊಳಿಸಿ, ಮಂಡಳಿಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ನೇಮಿಸಬೇಕು. ಜನರಿಗೆ ಜವಾಬ್ದಾರಿಯುತ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿ ಮಾಡಿದರು.
ಕೃಷ್ಣಾ ಕೊಳ್ಳದಲ್ಲಿ ಕರ್ನಾಟಕಕ್ಕೆ ಲಭ್ಯವಿರುವ 700 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಬೇಕು. ಕೃಷ್ಣಾ ನದಿ ನೀರಿನ ಬಳಕೆಗೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸುಸಜ್ಜಿತ ಕಟ್ಟಡಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ನಿರುದ್ಯೋಗಿ ವಿದ್ಯಾವಂತ ಯುವಕರಿಗಾಗಿ ವಿಶೇಷ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಹೈನುಗಾರಿಕೆಗೆ ವಿಶೇಷ ಯೋಜನೆ ಘೋಷಿಸುವುದರ ಜೊತೆಗೆ, ಬಳ್ಳಾರಿಯ ಜೀನ್ಸ್ ಉದ್ಯಮವನ್ನು ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಸ್ತರಿಸಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಮುಖಂಡರುಗಳಾದ ಚಾಮರಸ ಮಾಲಿ ಪಾಟೀಲ್, ಬಿ. ಬಸವರಾಜ, ಆರ್. ಬಸವರಾಜ, ಬೂದಯ್ಯಸ್ವಾಮಿ, ಶಾರದಾ ಹುಲಿನಾಯಕ, ಚಂದ್ರಶೇಖರ್ ನೆಲಹಾಳ, ಡಿ.ಎಸ್. ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಅಯ್ಯಣ್ಣ ಮಹಾಮನಿ, ರಂಗನಾಥ, ಕೆ.ಜಿ. ವೀರೇಶ, ಚನ್ನಬಸವ ಜಾನೇಕಲ್, ಹೆಚ್. ಪದ್ಮಾ, ವರಲಕ್ಷ್ಮೀ, ಪಂಪ ನಾಗೋಲಿ, ಎನ್.ಎಸ್. ವೀರೇಶ, ಮಹೇಶ ಚೀಕಲಪರ್ಚಿ, ಜಿ. ಅಮರೇಶ, ಪ್ರಭಾಕರ ಇಂಗಳದಾಳ, ವಿದ್ಯಾ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






