ರಾಯಚೂರು | ವಿದ್ಯುತ್ ಕಡಿತಗೊಳಿಸುವುದನ್ನು ಖಂಡಿಸಿ ಕರವೇಯಿಂದ ಪ್ರತಿಭಟನೆ

ರಾಯಚೂರು: ನಗರದ ಹಲವೆಡೆ ಪ್ರತಿ ದಿನ ಗಂಟೆಗೊಮ್ಮೆ, ಅನಿಯಮಿತವಾಗಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಹಾಗೂ ಜೆಸ್ಕಾಂ ಸರಿಯಾಗಿ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನವಶ್ಯಕವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಅಲ್ಲದೇ ಪ್ರತಿದಿನ ಹಗಲಿನಲ್ಲಿ ಕನಿಷ್ಠ ನಾಲ್ಕು ಬಾರಿ ಅರ್ಧಗಂಟೆಯಿಂದ ಒಂದು ತಾಸಿನವರೆಗೆ ಹಾಗೂ ರಾತ್ರಿ ವೇಳೆ 2-3 ಬಾರಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜನರ ನೆಮ್ಮದಿ ಹಾಳಾಗಿದೆ. ಕೊಳೆಗೇರಿ ಪ್ರದೇಶಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ ಎಂದು ದೂರಿದರು.
ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವ ಯೋಜನೆ ಶ್ಲಾಘನೀಯ. ಆದರೆ, ಅನಿಯಮಿತ ವಿದ್ಯುತ್ ಕಡಿತ ಯಾಕೆ ಎಂದು ಪ್ರಶ್ನಿಸಿದರು. ಇಂಧನ ಇಲಾಖೆ ಇದರ ಬಗ್ಗೆ ಗಮನಹರಿಸಿ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಖಲೀಲ್ ಪಾಷಾ, ರಾಚಯ್ಯ ಸ್ವಾಮಿ, ಕೆ.ದುರಗಪ್ಪ, ಶಂಕರ್, ಖಾಸಿಂಸಾಬ್, ತಾಹೇರ್ ಪಾಷಾ, ಮನ್ನಾನ್, ಚಂದ್ರಶೇಖರ, ಮೆಹಬೂಬ್ ಉಪಸ್ಥಿತರಿದ್ದರು.







