ರಾಯಚೂರು | ಅನಧಿಕೃತ ತರಕಾರಿ ಮಾರುಕಟ್ಟೆ ಸ್ಥಳಾಂತರಿಸದಿದ್ದರೆ ಹೋರಾಟ : ಮಹಾವೀರ್

ರಾಯಚೂರು: ನಗರದ ವಾರ್ಡ್ ನಂ.13ರಲ್ಲಿರುವ ಅನಧೀಕೃತ ತರಕಾರಿ ಮಾರುಕಟ್ಟೆಯನ್ನು ಹತ್ತು ದಿನಗಳೊಳಗಾಗಿ ತೆರವುಗೊಳಿಸಿ ಉಸ್ಮಾನಿಯಾ ಮುಖ್ಯ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಆಡಳಿತ ಮಂಡಳಿ ಹಾಗೂ ಆಯುಕ್ತರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ರಾಯಚೂರು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ಎಚ್ಚರಿಸಿದರು.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ತರಕಾರಿ ಮಾರುಕಟ್ಟೆಯನ್ನು ಇನ್ನೂ ಮುಂದುವರೆಸಲಾಗಿದೆ ಎಂದು ದೂರಿದರು.
ವಾರ್ಡ್ ನಂ.13ರ ಪಾಲಿಕೆ ಸದಸ್ಯೆಯ ಪತಿ ಅನಧೀಕೃತ ಮಾರುಕಟ್ಟೆಯನ್ನು ನಿರ್ಮಿಸಿದ್ದು, ಇದನ್ನು ಪಾಲಿಕೆಯ ಆಯುಕ್ತರು ಮೌನವಾಗಿ ನೋಡುತ್ತಿರುವುದು ಖಂಡನೀಯ ಎಂದರು.
ಅನಧೀಕೃತ ಮಾರುಕಟ್ಟೆಯಿಂದಾಗಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಅಂಗಡಿಗಳು ಖಾಲಿಯಾಗುತ್ತಿದ್ದು, ಸರ್ಕಾರಕ್ಕೂ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಅನೇಕ ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರೂ ಫಲಿತಾಂಶವಿಲ್ಲ ಎಂದರು.
ಹತ್ತು ದಿನಗಳೊಳಗೆ ಮಾರುಕಟ್ಟೆಯನ್ನು ತೆರವುಗೊಳಿಸದಿದ್ದರೆ ಆಡಳಿತ ಮಂಡಳಿ ಮತ್ತು ಆಯುಕ್ತರ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವ ಜೊತೆಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಭುನಾಯಕ, ಖಾಜಪ್ಪ, ಉದಯಕುಮಾರ, ಬಸವರಾಜ, ರಿಝ್ವಾನ್ ಸೇರಿದಂತೆ ಅನೇಕರಿದ್ದರು.







