ರಾಯಚೂರು | ಒಳ ಮೀಸಲಾತಿಗಾಗಿ ಆ.1 ರಂದು ಆಕ್ರೋಶ ಪ್ರತಿಭಟನೆ : ವಿರುಪಾಕ್ಷಿ

ರಾಯಚೂರು: ಪರಿಶಿಷ್ಟ ಜಾತಿಗಳಲ್ಲಿನ ಮಾದಿಗ ಸಂಬಂದಿತ ಜಾತಿಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಆ.1 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ಸಮಾಜದಿಂದ ಅಂತಿಮ ಆಕ್ರೋಶ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಮಾದಿಗ ಸಮಾಜದ ಮುಖಂಡ ಎಂ.ವಿರುಪಾಕ್ಷಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಕಳೆಯುತ್ತಾ ಬಂದರೂ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. ತೀರ್ಪಿನ ಬಳಿಕ ಮೊದಲ ರಾಜ್ಯವಾಗಿ ತೆಲಂಗಾಣ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿತು, ಬಳಿಕ ಆಂದ್ರಪ್ರದೇಶ, ಹರಿಯಾಣ ಸರ್ಕಾರಗಳು ಜಾರಿಗೊಳಿಸಿವೆ. ಆದರೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ರಚನೆ ಮಾಡಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂತರಾಜ ಆಯೋಗ ವರದಿ ಮತ್ತಿತರೆ ಆಯೋಗಗಳ ವರದಿಯಲ್ಲಿ ಡಾಟಾ ಪಡೆದು ಒಳ ಮೀಸಲಾತಿ ಜಾರಿ ಮಾಡಬಹುದಾಗಿತ್ತು. ಕಳೆದ 9 ವರ್ಷಗಳಿಂದ ವಿವಿಧ ಹಂತಗಳಲ್ಲಿ ಒಳ ಮೀಸಲಾತಿ ಹೋರಾಟ ಮಾಡಿದ್ದು, ಆ.4 ರಂದು ಸದಾಶಿವ ಆಯೋಗ ವರದಿ ಸರ್ಕಾರಕ್ಕೆ ಸಲ್ಲಿಸಲಿದ್ದು, ಆ.15 ರೊಳಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಿದ್ದೇವೆ, ನಾಳೆ ಜಿಲ್ಲಾ ಮಟ್ಟದ ಅಂತಿಮ ಆಕ್ರೋಶ ಪ್ರತಿಭಟನೆ ಮಾಡಿ ಬಳಿಕ ರಾಜ್ಯಮಟ್ಟದ ಎರೆಡು ಹೋರಾಟ ಮಾಡಿ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಪಿ.ಯಲ್ಲಪ್ಪ, ರವೀಂದ್ರ ಜಲ್ದಾರ್, ನಾಗರಾಜ, ಶಂಶಾಲಂ ಮತ್ತಿತರರು ಇದ್ದರು.







