ರಾಯಚೂರು | ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ನೀಡಲು ಒತ್ತಾಯಿಸಿ ಸೆ.17 ರಂದು ಪ್ರತಿಭಟನೆ

ರಾಯಚೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಅಲೆಮಾರಿ ಸಮೂದಾಯಗಳಿಗೆ ಶೇ.1ರಷ್ಟು ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಸೆ.17 ರಂದು ಅಸ್ಪೃಶ್ಯ ಅಲೆಮಾರಿ ಸಮೂದಾಯಗಳ ಮಹಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸುಡುಗಾಡು ಸಿದ್ದ ಸಮೂದಾಯ ಮುಖಂಡ ಹುಸೇನಪ್ಪ ವಿಭೂತಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ನ್ಯಾ.ನಾಗಮೋಹನ ದಾಸ ನೀಡಿರುವ ಆಯೋಗದ ವರದಿಯಲ್ಲಿ ಅಲೆಮಾರಿಗಳಿಗೆ ಶೇ.1 ಮೀಸಲಾತಿ ನಿಗಧಿಗೊಳಿಸಿ ಶಿಫಾರಸ್ಸು ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಮೀಸಲಾತಿಯ ಹಂಚಿಕೆಯಲ್ಲಿ ಐದು ಪ್ರವರ್ಗಗಳನ್ನು ಮೂರು ಪ್ರವರ್ಗಗಳಾಗಿ ವಿಗಂಡಿಸಿ ಅಲೆಮಾರಿ 59 ಸಮೂದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿ ಸಮಾಜಿಕ ನ್ಯಾಯವನ್ನು ಉಲ್ಲಂಘಿಸಲಾಗಿದೆ. ಶಿಕ್ಷಣ, ಸಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮೂದಾಯಗಳು ಬಲಾಢ್ಯ ಸಮೂದಾಯಗಳೊಂದಿಗೆ ಸೌಲಭ್ಯ ಪಡೆಯಲು ಆಗದೇ ನಿರ್ಧರಿಸಿರುವುದು ಅವೈಜ್ಞಾನಿಕ, ಸಂವಿಧಾನ ವಿರೋಧಿ ಕ್ರಮವಾಗಿದೆ. ಕೂಡಲೇ ಇದನ್ನು ರದ್ದುಗೊಳಿಸಿ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿಯನ್ನು ಅಲೆಮಾರಿ ಸಮೂದಾಯಗಳಿಗೆ ನೀಡಬೇಕೆಂದು ಆಗ್ರಹಿಸಿ ಹೋರಾಟ ನಡೆಯಲಿದೆ ಎಂದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಗರದ ವಿವಿಧ ರಸ್ತೆಗಳ ಮೂಲಕ ಟಿಪ್ಪು ಸುಲ್ತಾನ ಗಾರ್ಡನ್‍ನಲ್ಲಿ ಸಮಾವೇಶಗೊಳ್ಳಲಿದೆ. ಕಲ್ಯಾಣ ಕರ್ನಾಟಕದ ವಿಮೋಚನಾ ದಿನದಲ್ಲಿ ಭಾಗವಹಿಸುವ ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪಡೆದು ಸರ್ಕಾರ ಮೇಲೆ ಒತ್ತಡ ಹಾಕಿ ವಿಮೋಚನೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಮೇಶ ಯಾಪಲದಿನ್ನಿ, ಶ್ರೀನಿವಾಸ.ಎಸ್.ಆರ್, ಚಿನ್ನಪ್ಪ ಯಾಪಲಪರ್ವಿ, ರಂಗಪ್ಪ, ತಿಮ್ಮಪ್ಪ, ಯಲ್ಲಪ್ಪ, ಸಿಂಹಾದ್ರಿ ಸೇರಿ ಅನೇಕರಿದ್ದರು.







