Raichur | ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಹಬ್ಬ ಸಾರ್ವಜನಿಕವಾಗಿ ಆಚರಣೆ ನಿಷೇಧ: ಡಿಸಿ ಪೂವಿತಾ ಎಸ್.

ರಾಯಚೂರು: ಜಿಲ್ಲೆಯ ಸಿಂಧನೂರು, ಮಾನವಿ, ಸಿರವಾರ, ದೇವದುರ್ಗ ಹಾಗೂ ಮಸ್ಕಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೊಹರಂ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗುಂಪುಗೂಡಿ ಆಚರಣೆ ನಡೆಸುವುದು ಹಾಗೂ ಮೆರವಣಿಗೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಪೂವಿತಾ ಎಸ್. ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 35ರ ಅನ್ವಯ ಈ ಆದೇಶ ಜಾರಿಗೊಳಿಸಲಾಗಿದ್ದು, ಜೂ.17ರಿಂದ ಜೂ.26ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.
ಸಿಂಧನೂರು, ತುರ್ವಿಹಾಳ, ಬಳಗಾನೂರು, ಮಾನ್ವಿ, ಸಿರವಾರ, ಕವಿತಾಳ, ಮಸ್ಕಿ, ಜಾಲಹಳ್ಳಿ ಹಾಗೂ ಗಬ್ಬೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಒಟ್ಟು 29 ಗ್ರಾಮಗಳಲ್ಲಿ ಈ ನಿಷೇಧಾಜ್ಞೆ ಅನ್ವಯವಾಗಲಿದೆ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಗಿಣಿವಾರ, ಉಪ್ಪಳ, ನಿಡಿಗೊಳ-ತಿಡಿಗೋಳ, ಹತ್ತಿಗುಡ್ಡ, ಕುರಕುಂದಾ, ಚಿಕ್ಕಬೇರ್ಗಿ, ಉದ್ಬಳ್ (ಯು), ರಾಗಲಪರ್ವಿ, ನಂದಿಹಾಳ, ಜಾನೇಕಲ್, ಮದ್ಲಾಪೂರು, ಜಾಗೀರ ಪನ್ನೂರು, ಮಲ್ಲಿನಮಡಗು, ಸಿರವಾರ ಪಟ್ಟಣ, ಕಡದಿನ್ನಿ, ಬೊಮ್ಮನಾಳ, ಕವಿತಾಳ ಪಟ್ಟಣ, ಹಿರೆಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೂಗೆಬಾಳ, ತಲೇಖಾನ್, ಸಂತೆಕಲ್ಲೂರು, ಮುಸಲಿ ಕಾರಲಕುಂಟೆ, ಚಿಂಚೋಡಿ, ಖಾನಾಪೂರು, ಬುದ್ದಿನ್ನಿ, ರಾಮದುರ್ಗ ಹಾಗೂ ಹಿರೇಬೂದೂರು ಗ್ರಾಮಗಳು ನಿಷೇಧದ ವ್ಯಾಪ್ತಿಗೆ ಒಳಪಡುತ್ತವೆ.
ಸಾರ್ವಜನಿಕ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಆದೇಶವನ್ನು ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ.






