ರಾಯಚೂರು | ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ, ದೂರು ವಿಚಾರಣೆ

ರಾಯಚೂರು: ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಆ.29ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು, ಕುಂದುಕೊರತೆ ಮತ್ತು ದೂರು ವಿಚಾರಣೆ ಕೈಗೊಂಡರು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆ.29ರ ಸಂಜೆ 4.45ರವರೆಗೆ ಸ್ವೀಕೃತವಾದ 320 ಅಹವಾಲು ಅರ್ಜಿಗಳ ಪೈಕಿ ಸಂಜೆ 4.45ರವರೆಗೆ 100 ಅರ್ಜಿಗಳ ಬಗ್ಗೆ ಉಪ ಲೋಕಾಯುಕ್ತರು, ಆಯಾ ಇಲಾಖೆಯ ಅಧಿಕಾರಿಗಳನ್ನು ಕರೆದು ದೂರುಗಳ ಬಗ್ಗೆ ವಿಚಾರಣೆ ನಡೆಸಿದರು.
ದೂರು ಅರ್ಜಿ ನೋಂದಾಯಿಸಿದ ಅರ್ಜಿದಾರರ ಹೆಸರು ಮತ್ತು ದೂರಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಇಲಾಖೆ ಮತ್ತು ಹೆಸರನ್ನು ಮೈಕ್‌ನಲ್ಲಿ ಕೂಗಿ, ಅವರಿಗೆ ವೇದಿಕೆಗೆ ಕರೆದು ವಿಚಾರಣೆ ಪ್ರಕ್ರಿಯೆ ನಡೆಸಲಾಯಿತು.
ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕರು ಆಗಿರುವ ನ್ಯಾ.ರಮಾಕಾಂತ ಚವ್ಹಾಣ್, ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕರು ಆಗಿರುವ ನ್ಯಾಯಾಧೀಶರಾದ ಅರವಿಂದ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಹೆಚ್.ಎ.ಸಾತ್ವಿಕ, ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ ಮತ್ತು ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಬಿ.ಚಿಟುಗುಬ್ಬಿ ಹಾಗೂ ಇತರರ ಸಮಕ್ಷಮದಲ್ಲಿ ಉಪ ಲೋಕಾಯುಕ್ತರು ಸಂಜೆ 4.45ರವರೆಗೆ 100 ಅರ್ಜಿಗಳ ವಿಚಾರಣೆ ನಡೆಸಿ, ಬಾಕಿ ಅರ್ಜಿಗಳ ವಿಚಾರಣೆ ಪ್ರಕ್ರಿಯೆಯನ್ನು ಮುಂದುವರೆಸಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸನ ರಾಯಚೂರು ಡಿಎಸ್ಪಿ ರವಿ ಪುರಷೋತ್ತಮ, ಕೊಪ್ಪಳ ಡಿಎಸ್ಪಿ ವಸಂತಕುಮಾರ ಹಾಗೂ ಪೊಲೀಸ್ ನಿರೀಕ್ಷಕರಾದ ಕಾಳಪ್ಪ ಬಡಿಗೇರ, ಚಂದ್ರಪ್ಪ, ಸುನೀಲ್ ಮೇಗಲಮನಿ, ಶೈಲಜಾ ಮತ್ತು ನಾಗರತ್ನ ಅವರು ನೋಂದಣಿ, ಫೈಲಿಂಗ್, ಟೋಕನ್ ನಂಬರ್ ವಿತರಣೆ ನಾನಾ ಕಾರ್ಯದ ಮೂಲಕ ಉಪ ಲೋಕಾಯುಕ್ತರ ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಿದರು.
ಬೆಳಗಿನ ಅವಧಿಯಲ್ಲಿ ವಿಚಾರಣೆಗೆ ಎತ್ತಿಕೊಂಡ ಅರ್ಜಿಗಳ ಪೈಕಿ ಹೆಚ್ಚಿನ ದೂರುಗಳು ತಹಶೀಲ್ ಕಚೇರಿ ಮತ್ತು ಮಹಾನಗರ ಪಾಲಿಕೆಗೆ ಸಂಬಂಧಿಸಿದ್ದವು.
ಮುಂದುವರೆದ ವಿಚಾರಣೆ :
ಮಧ್ಯಾಹ್ನ ಊಟದ ವಿರಾಮದ ನಂತರವು ಸಹ ಉಪ ಲೋಕಾಯುಕ್ತರು ಅಹವಾಲು ಅರ್ಜಿಗಳ ವಿಚಾರಣೆಯನ್ನು ಮುಂದುವರೆಸಿದರು.
ತಾತ್ಕಾಲಿಕ ನ್ಯಾಯಾಲಯ ನಿರ್ಮಾಣ :
ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು, ಕುಂದುಕೊರತೆ ಮತ್ತು ದೂರುಗಳ ವಿಚಾರಣೆಗಾಗಿ ಕೃಷಿ ವಿವಿಯ ಜಗಜ್ಯೋತಿ ಬಸವೇಶ್ವರ ಸಭಾಂಗಣದ ಮೇಲೆ ಶಿಸ್ತುಬದ್ದವಾಗಿ ಟೇಬಲ್ ಮತ್ತು ಖುರ್ಚಿ ಅಳವಡಿಸಿ, ಕಡತ, ಕಾಗದ ಪತ್ರಗಳನ್ನಿಟ್ಟು ಸಭಾಂಗಣವನ್ನು ತಾತ್ಕಾಲಿಕ ನ್ಯಾಯಾಲಯವನ್ನಾಗಿ ಮಾರ್ಪಡಿಸಲಾಗಿತ್ತು.
ನೋಂದಣಿಗೆ ವ್ಯವಸ್ಥೆ:
ಉಪ ಲೋಕಾಯುಕ್ತರ ಬಳಿಯಲ್ಲಿ ದೂರು ಸಲ್ಲಿಸಲು ಬರುವ ಸಾರ್ವಜನಿಕರಿಗೆ ನೋಂದಣಿಗಾಗಿ ಆಡಿಟೋರಿಯಂ ಹಾಲ್‌ನ ಪ್ರವೇಶ ದ್ವಾರದ ಬಳಿಯ ಎರಡೂ ಕಡೆಯಲ್ಲಿ ಕಂಪ್ಯೂಟರ್ ಅಳವಡಿಸಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಗಜಾನನ ಬಾಳೆ ಹಾಗೂ ಲೋಕಾಯುಕ್ತ ಕಚೇರಿ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.







