Raichur | ಸೊಳ್ಳೆ ಉತ್ಪತಿ ತಾಣಗಳ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ

ರಾಯಚೂರು: ಮಾನ್ಸೂನ್ ಮಳೆಯ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಸಹಕರಿಸಬೇಕು. ವಾಣಿಜ್ಯ ಮಳಿಗೆಗಳು ಹಾಗೂ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡುಬಂದರೆ ಸರ್ಕಾರದ ಮಾರ್ಗಸೂಚಿಯಂತೆ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೆಂಗ್ಯೂ ಶಂಕಿತ ಪ್ರಕರಣಗಳು ವರದಿಯಾದ ತಕ್ಷಣ ಸ್ಥಳೀಯ ಸಂಸ್ಥೆಗಳು ಫಾಗಿಂಗ್ ನಡೆಸಬೇಕು. ನೀರು ಸರಬರಾಜು ಪೈಪ್‌ಗಳ ಸೋರಿಕೆ ತಡೆದು, ಓವರ್‌ಹೆಡ್ ಹಾಗೂ ಅಂಡರ್‌ಗ್ರೌಂಡ್ ಟ್ಯಾಂಕ್‌ಗಳಿಗೆ ಮುಚ್ಚಳ ಅಳವಡಿಸಬೇಕು. ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಪ್ರತಿದಿನ ಜಾಗೃತಿ ಸಂದೇಶಗಳನ್ನು ಪ್ರಸಾರ ಮಾಡಬೇಕು. ಶಾಲಾ ಆವರಣಗಳನ್ನು ಲಾರ್ವಾ ಮುಕ್ತವಾಗಿರಿಸಿ, ‘ಲಾರ್ವಾ ಮುಕ್ತ ಶಾಲೆ’ ಎಂದು ಘೋಷಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು. ಅಂಗನವಾಡಿ ಕೇಂದ್ರಗಳಲ್ಲಿಯೂ ಸೊಳ್ಳೆ ಉತ್ಪತ್ತಿಯಾಗದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಗಾ ವಹಿಸಬೇಕು ಎಂದರು.
ಸಾರಿಗೆ ಇಲಾಖೆಯ ಡಿಪೊಗಳಲ್ಲಿ ಬಳಕೆಯಾಗದ ಟೈರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಾವರಿ ಇಲಾಖೆ ಕಾಲುವೆಗಳ ಬಳಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಬಹುಕಾಲ ನೀರು ನಿಲ್ಲುವ ಪ್ರದೇಶಗಳಲ್ಲಿ ಲಾರ್ವಾ ನಿಯಂತ್ರಣಕ್ಕಾಗಿ ಗಪ್ಪಿ ಹಾಗೂ ಗ್ಯಾಂಬ್ಯೂಸಿಯಾ ಮೀನುಗಳನ್ನು ಸಾಕಿ ಆರೋಗ್ಯ ಇಲಾಖೆಗೆ ಒದಗಿಸುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಮಾತನಾಡಿ, ಜಿಲ್ಲೆಯಲ್ಲಿ ಆನೆಕಾಲು ರೋಗದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ಗ್ರಾಮಗಳು ಹಾಗೂ ವಲಸೆ ಪ್ರದೇಶಗಳಲ್ಲಿ ರಾತ್ರಿ ವೇಳೆ ರಕ್ತಲೇಪನ ಪರೀಕ್ಷೆ ನಡೆಸಲಾಗುತ್ತಿದೆ. ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ನಡುಗಡ್ಡೆ ಹಳ್ಳಿಗಳಲ್ಲಿ ಮಲೇರಿಯಾ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮನೆಗಳ ಒಳಭಾಗದಲ್ಲಿ ಕೀಟನಾಶಕ ಸಿಂಪಡಣೆ, ಸೊಳ್ಳೆ ಪರದೆ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರಯ್ಯ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸೊಳ್ಳೆ ಉತ್ಪತ್ತಿ ತಡೆಗೆ ಸರ್ಕಾರ ದಂಡದ ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ಮನೆಗಳಿಗೆ 400 ರೂ., ನಗರ ಪ್ರದೇಶದ ಮನೆಗಳಿಗೆ 800 ರೂ., ಗ್ರಾಮೀಣ ವಾಣಿಜ್ಯ ಮಳಿಗೆಗಳಿಗೆ 1,000 ರೂ., ನಗರ ವಾಣಿಜ್ಯ ಮಳಿಗೆಗಳಿಗೆ 2,000 ರೂ., ಗ್ರಾಮೀಣ ಕಟ್ಟಡ ನಿರ್ಮಾಣ ಸ್ಥಳಗಳಿಗೆ 2,000 ರೂ. ಹಾಗೂ ನಗರ ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳಗಳಿಗೆ 4,000 ರೂ. ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ರಿಮ್ಸ್ ವೈದ್ಯಕೀಯ ಅಧಿಕ್ಷಕರು ಎಸ್.ಮಂಡುರಕರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಗಣೇಶ.ಕೆ, ಡಾ.ಶಿವಕುಮಾರ ನಾರಾ, ಡಾ.ಯಶೋಧಾ, ಐ.ಎಂ.ಎ ಸದಸ್ಯರಾದ ಡಾ.ಶುಶ್ರೂತ್, ಪರಿಸರ ಅಭಿಯಂತರರು ಜೈಪಾಲ ರೆಡ್ಡಿ, ಶಿಕ್ಷಣ, ಮೀನುಗಾರಿಕೆ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶರಣಮ್ಮ ಸೇರಿದಂತೆ ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಲ್ಲಾ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.






