Raichur | ರಾಣೆಮ್ಮ, ಭೂಮಾನಂದ ಕೊಲೆ ಪ್ರಕರಣ; ಕುಟುಂಬಗಳಿಗೆ ತಲಾ 2 ಎಕರೆ ಜಮೀನು: ಜಿ.ಎಸ್. ಮಂಜುನಾಥ
ಪರಿಹಾರ, ಶಿಕ್ಷಣ, ಉದ್ಯೋಗ ನೆರವಿನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ

ರಾಯಚೂರು: ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ದಲಿತ (ಮಾದಿಗ) ಸಮುದಾಯದ ರಾಣೆಮ್ಮ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತು ದೇವದುರ್ಗ ತಾಲೂಕಿನ ಭೂಮಾನಂದ ಕೊಲೆ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಎಕರೆ ಜಮೀನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಮ್ಮ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಅವಕಾಶವಿದ್ದರೂ ಅಗತ್ಯ ವಿದ್ಯಾರ್ಹತೆ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ರಾಣೆಮ್ಮ ಅವರ ಮಗಳು ಸುಜಾತ 7ನೇ ತರಗತಿ ಓದುತ್ತಿದ್ದು, ಮಗ ಪ್ರಸನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ. ಡಿ-ಗ್ರೂಪ್ ಹುದ್ದೆಗೂ ಕನಿಷ್ಠ ವಿದ್ಯಾರ್ಹತೆ ಅಗತ್ಯವಾಗಿರುವುದರಿಂದ ಸರ್ಕಾರಿ ಉದ್ಯೋಗ ನೀಡುವ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಭೂಮಾನಂದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ 4.5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೂ 4.5 ಲಕ್ಷ ರೂ. ಸೇರಿಸಿ ಒಟ್ಟು 9 ಲಕ್ಷ ರೂ. ವನ್ನು ಸ್ಥಿರ ಠೇವಣಿಯಾಗಿ (ಎಫ್‌ಡಿ) ಇಡಲಾಗುವುದು ಎಂದರು. ಭೂಮಾನಂದ ಅವರ ಮೂವರು ಪುತ್ರಿಯರಿಗೆ ಪಿಯುಸಿವರೆಗೆ ಉಚಿತ ಶಿಕ್ಷಣ ಕಲ್ಪಿಸಲಾಗುವುದು. ಬೆಂಗಳೂರಿಗೆ ವಲಸೆ ಹೋಗಿರುವ ಅವರ ಮೂವರು ಸಹೋದರರಿಗೆ ನಿಗಮದ ವತಿಯಿಂದ ಕಾರು ಖರೀದಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಹೊಕ್ರಾಣಿ ಗ್ರಾಮದ ಅಶ್ವಿನಿ (ಛಲವಾದಿ) ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಿಗಮದ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಈಚನಾಳ ಅಸ್ಪೃಶ್ಯತೆ ಪ್ರಕರಣ ಖಂಡನೆ :
ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಹೋಟೆಲ್‌ನಲ್ಲಿ ನಡೆದ ಅಸ್ಪೃಶ್ಯತೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಿ.ಎಸ್. ಮಂಜುನಾಥ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ದಲಿತರಿಗೆ ಕುಡಿಯಲು ಲೋಟ ನೀಡದೆ ಮೇಲಿಂದ ನೀರು ಹಾಕುವಂತಹ ಘಟನೆ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಅಸ್ಪೃಶ್ಯತೆ ಬಹುತೇಕ ಕಡಿಮೆಯಾಗಿದ್ದರೂ ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು ಬುದ್ಧಿ ಕಲಿಸಬೇಕು ಎಂದು ಅವರು ಒತ್ತಾಯಿಸಿದರು.






