Raichur | ದೇವದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಗೆ ಆರ್‌ಸಿಎಚ್ ಅಧಿಕಾರಿ ಭೇಟಿ, ಪರಿಶೀಲನೆ

ರಾಯಚೂರು: ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಂದಿತಾ ಎಂ.ಎನ್. ತಿಳಿಸಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಹೆಚ್‌ಪಿವಿ ಲಸಿಕೆ ಕಾರ್ಯವನ್ನು ಪರಿಶೀಲಿಸಿದ ವೇಳೆ ಅವರು ಮಾತನಾಡಿದರು. ಈ ಲಸಿಕೆ ಹೊಸದೇನಲ್ಲ, ಜಗತ್ತಿನಾದ್ಯಂತ ಈಗಾಗಲೇ 50 ಕೋಟಿಗೂ ಅಧಿಕ ಜನರಿಗೆ ನೀಡಲಾಗಿದ್ದು, ಕಳೆದ 15 ವರ್ಷಗಳ ಅಂಕಿ-ಅಂಶಗಳು ಇದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿವೆ ಎಂದು ತಿಳಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ 14 ವರ್ಷ ಪೂರೈಸಿದ ಹಾಗೂ 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಪಾಲಕರು ಯಾವುದೇ ತಪ್ಪು ನಂಬಿಕೆಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮಾಹಿತಿಗಳಿಗೆ ಒಳಗಾಗದೆ, ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುವ ಹೆಚ್‌ಪಿವಿ ಸೋಂಕು ವೈಯಕ್ತಿಕ ಸ್ವಚ್ಛತೆ ಕೊರತೆ, ಜನನಾಂಗ ಸಮಸ್ಯೆಗಳು ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಈ ಸೋಂಕು ಕ್ರಮೇಣ ಜೀವಕೋಶಗಳಲ್ಲಿ ಬದಲಾವಣೆ ಉಂಟುಮಾಡಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದ್ದರಿಂದ ಈ ರೋಗವನ್ನು ತಡೆಗಟ್ಟಲು ಹೆಚ್‌ಪಿವಿ ಲಸಿಕೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ದೇವದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಬನದೇಶ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕು ಎಂದು ಕೋರಿದರು.
ಈ ವೇಳೆ ಲಸಿಕೆ ಪಡೆಯಲು ನಿರಾಕರಿಸಿದ್ದ ಕುಟುಂಬಗಳ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಭೇಟಿ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಶಾಂತಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಪುನೀತ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಈರಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸಿಬ್ಬಂದಿಯವರಾದ ಶಾರೋನ, ನರಸಮ್ಮ, ಮನೋಜ್ ಸೇರಿದಂತೆ ಪಿ.ಹೆಚ್.ಸಿ.ಓ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರ ಇದ್ದರು.






