ರಾಯಚೂರು | ವಿಕಲಚೇತನ ಯೋಜನೆಯಡಿ ತ್ರಿಚಕ್ರ ವಾಹನಕ್ಕೆ ನಿರಾಕರಣೆ; ಟ್ಯಾಂಕ್ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯ ರಕ್ಷಣೆ

ರಾಯಚೂರು : ಸರಕಾರದಿಂದ ವಿಕಲಚೇತನ ಯೋಜನೆಯಡಿ ತ್ರಿಚಕ್ರ ವಾಹನ ನೀಡದ್ದಕ್ಕೆ ಹಾಗೂ 11 ತಿಂಗಳ ಪಿಂಚಣಿ ಬಾಕಿ ಇರುವ ಕಾರಣಕ್ಕೆ ಮನನೊಂದ ವಿಶೇಷ ಚೇತನ ವ್ಯಕ್ತಿಯೊರ್ವ ಒವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ದೇವಸುಗೂರಿನ ಲೇಬರ್ ಕಾಲೋನಿ ನಿವಾಸಿ ಶಫಿ (ಮುನ್ನಾ) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್)ದ ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿದ್ದ ಶಫಿ ಅವರು ವಿಕಲಚೇತನರಿಗೆ ಕೊಡುವ ತ್ರಿಚಕ್ರದ ಸ್ಕೂಟಿ ಮಂಜೂರು ಮಾಡಿಸಿಕೊಳ್ಳಲು ನಾಲ್ಕೈದು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣಕ್ಕೆ ಒವರ್ ಹೆಡ್ ಟ್ಯಾಂಕ್‌ನ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಮಾಹಿತಿ ಪಡೆದ ಠಾಣೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಶಫಿಯ ಮನವೊಲಿಸಿದ್ದಾರೆ. ನಾಲ್ಕು ಚಕ್ರದ ವಾಹನ ಕೊಡಿಸುವುದಾಗಿ ಭರವಸೆ ಕೊಟ್ಟ ಬಳಿಕ ಶಫಿ ಅವರು ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.





