Raichur | ವೈಟಿಪಿಎಸ್ ಭೂಸಂತ್ರಸ್ತರಿಗೆ ಉದ್ಯೋಗ ನೀಡಲು ಮೂರು ವರ್ಷಗಳ ಷರತ್ತು ಸಡಿಲಿಸಿ: ಕೆ.ಸತ್ಯನಾರಾಯಣರಾವ್

ರಾಯಚೂರು: ಯರಮರಸ್ ಥರ್ಮಲ್ ಪವರ್ ಸ್ಟೇಷನ್ (ವೈಟಿಪಿಎಸ್) ಘಟಕ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡಿರುವ ಭೂಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ನೇರ ಉದ್ಯೋಗ ಅಥವಾ ತರಬೇತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ವಿಧಿಸಿರುವ ಮೂರು ವರ್ಷಗಳ ಭೂ ಒಡೆತನದ ಷರತ್ತನ್ನು ಸಡಿಲಿಸಿ ಕೂಡಲೇ ಉದ್ಯೋಗ ನೀಡಬೇಕು ಎಂದು ರಾಯಚೂರು ಕೈಗಾರಿಕಾ ಪ್ರದೇಶ ಭೂಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ. ಸತ್ಯನಾರಾಯಣರಾವ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದೆ ವೈಟಿಪಿಎಸ್ ಘಟಕ ಸ್ಥಾಪನೆಗಾಗಿ ರಾಯಚೂರು ತಾಲೂಕಿನ ಏಗನೂರು, ಚಿಕ್ಕಸೂಗೂರು, ಕುಕನೂರು, ಹೆಗ್ಗಸನಹಳ್ಳಿ ಹಾಗೂ ದೇವಸೂಗೂರು ಗ್ರಾಮಗಳ ಸುಮಾರು 1,150 ಎಕರೆ ಫಲವತ್ತಾದ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನದ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಯಾವುದೇ ಷರತ್ತು ವಿಧಿಸದೆ ಒಬ್ಬರಿಗೆ ನೇರ ಉದ್ಯೋಗ ಅಥವಾ ತರಬೇತಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ತಿಳಿಸಿದರು.
2016ರಲ್ಲಿ ಭೂಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಅರ್ಜಿಗಳನ್ನು ಪಡೆದು, ವಿದ್ಯಾರ್ಹತೆಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಮೂರು ವರ್ಷಗಳ ಭೂ ಒಡೆತನ ಇಲ್ಲ ಎಂಬ ಕಾರಣ ನೀಡಿ 33 ಕುಟುಂಬಗಳ ಸದಸ್ಯರಿಗೆ ಸೂಚನಾ ಪತ್ರ ನೀಡಲಾಗಿದೆ. ಈ ಷರತ್ತನ್ನು ಸಡಿಲಿಸುವಂತೆ ಕಳೆದ ಹಲವು ವರ್ಷಗಳಿಂದ ಮುಖ್ಯಮಂತ್ರಿಗಳು, ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಭೂ ಒಡೆತನದ ಅವಧಿಯ ಷರತ್ತನ್ನು ಸಡಿಲಿಸುವುದಾಗಿ ಹಲವು ವರ್ಷಗಳಿಂದ ಭರವಸೆ ನೀಡಲಾಗುತ್ತಿದ್ದರೂ, ಇದುವರೆಗೆ 33 ಭೂಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭವಾಗಿಲ್ಲ. ಇದರಿಂದ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯ ಹಾಗೂ ಕಲಹಗಳು ಉಂಟಾಗಿ, ಕೆಲವರು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ವೈಟಿಪಿಎಸ್ ಘಟಕ ರಾಜ್ಯಕ್ಕೆ ವಿದ್ಯುತ್ ಒದಗಿಸುತ್ತಿದ್ದರೂ, ಘಟಕಕ್ಕಾಗಿ ಭೂಮಿ ಕಳೆದುಕೊಂಡ ರೈತರ ಕುಟುಂಬಗಳ ಬದುಕು ಸಂಕಷ್ಟದಲ್ಲಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಸಮಸ್ಯೆಯನ್ನು ಪರಿಗಣಿಸಿ, ಭೂ ಒಡೆತನದ ಷರತ್ತನ್ನು ಸಡಿಲಿಸಿ ಅರ್ಹ ಭೂಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಕೂಡಲೇ ನೇರ ಉದ್ಯೋಗ ಅಥವಾ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ಮನವಿಗೆ ಸ್ಪಂದಿಸದಿದ್ದರೆ ಭೂಸಂತ್ರಸ್ತ ಕುಟುಂಬಗಳ ಸದಸ್ಯರು ರಸ್ತೆಗಿಳಿದು ಧರಣಿ ನಡೆಸಬೇಕಾಗುತ್ತದೆ. ನಮ್ಮ ಉದ್ದೇಶ ಯಾವುದೇ ಸಂಘರ್ಷ ಸೃಷ್ಟಿಸುವುದಲ್ಲ; ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತವಾಗಿ ಉದ್ಯೋಗ ದೊರಕಿಸಿಕೊಡುವುದೇ ಹೋರಾಟದ ಉದ್ದೇಶವಾಗಿದೆ ಎಂದು ಕೆ. ಸತ್ಯನಾರಾಯಣರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಜಿ. ಪ್ರಭು ಮಡಿವಾಳ, ಭೀಮಣ್ಣ ಗೌಡ, ಶರಣಪ್ಪ ಗೌಡ, ರಾಘವೇಂದ್ರ, ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.






