Raichur | ರೈತರ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆ ಮಾಡಿ: ಮಾಜಿ ಸಚಿವ ಕೆ.ಶಿವನಗೌಡ ನಾಯಕ ಆಗ್ರಹ

ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಜಿಲ್ಲೆಯ ಮೂಲಕವೇ ಹರಿಯುತ್ತಿದ್ದರೂ ನೀರಾವರಿಗೆ ಸಮರ್ಪಕವಾಗಿ ನೀರು ದೊರೆಯದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಭತ್ತ ಹಾಗೂ ಮೆಣಸಿನಕಾಯಿ ಬೆಳೆದಿರುವ ರೈತರ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಆದ್ದರಿಂದ ತಕ್ಷಣವೇ ನೀರು ಬಿಡುಗಡೆ ಮಾಡಿ ರೈತರ ಬೆಳೆಗಳನ್ನು ಉಳಿಸಬೇಕು ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ಆಗ್ರಹಿಸಿದರು.
ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ಭಾಗಶಃ ಕಲಬುರಗಿ ಜಿಲ್ಲೆಗಳ ರೈತರಿಗೆ ನೀರು ಒದಗಿಸಲು ಸಾಕಷ್ಟು ನೀರಿನ ಲಭ್ಯತೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ನೀರು ಹರಿಸದೆ ಜಿಂದಾಲ್ ಮತ್ತು ಬಲ್ಡೋಟಾ ಕಂಪನಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆಂಧ್ರಪ್ರದೇಶಕ್ಕೂ ನೀರು ಹರಿಸಲಾಗುತ್ತಿದೆ. ಹೀಗಿರುವಾಗ ಜಿಲ್ಲೆಯ ರೈತರಿಗೆ ನೀರು ದೊರೆಯದಿರುವುದು ದುರದೃಷ್ಟಕರ ಎಂದು ಹೇಳಿದರು.
ಕೈಗಾರಿಕೆಗಳಿಗೆ ಹಾಗೂ ಹೊರರಾಜ್ಯಗಳಿಗೆ ನೀರು ಹರಿಸುವುದಕ್ಕೆ ಆದ್ಯತೆ ನೀಡುವ ಬದಲು ಮೊದಲು ಸ್ಥಳೀಯ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಒದಗಿಸಬೇಕು. ರೈತರ ಬೆಳೆಗಳಿಗೆ ನೀರು ಬಿಡುಗಡೆ ಮಾಡದೆ ಕಂಪನಿಗಳಿಗೆ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ನವಲಿ ಜಲಾಶಯ ಹಾಗೂ ತಿಂಥಣಿ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕು. ಈ ಯೋಜನೆಗಳಿಂದ ಐದು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ ಈ ಭಾಗದ ರೈತರು ನೀರಿನ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ತುರ್ತು ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಇಂತಹ ಗಂಭೀರ ನೀರಾವರಿ ಸಮಸ್ಯೆ ಉಂಟಾಗಲು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಪ್ರಮುಖ ಕಾರಣವಾಗಿದೆ. ರೈತರ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರ ಪರವಾಗಿ ಧ್ವನಿ ಎತ್ತಬೇಕು. ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ರೈತರ ಬದುಕು ಹಾಗೂ ಕೃಷಿ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ರೈತರ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸದೆ ನ್ಯಾಯಸಮ್ಮತ ಹಾಗೂ ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ಪರಿಹರಿಸಬೇಕು. ನವೆಂಬರ್ 22ರೊಳಗೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೆ. ಶಿವನಗೌಡ ನಾಯಕ ಒತ್ತಾಯಿಸಿದರು.






