ರಾಯಚೂರು | ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ರಾಯಚೂರು : ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು.
ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ಕೆ.ರಮೇಶ್ ಅವರು ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿ ಅವರು, ಭಾರತ ಜಾತ್ಯಾತೀತ ರಾಷ್ಟ್ರ. ಭಾರತದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ, ಇಚ್ಛೆಯ ಧರ್ಮವನ್ನು ಸ್ವೀಕರಿಸುವ, ಎಲ್ಲಿ ಬೇಕಾದರೂ ಜೀವಿಸುವ ಹಕ್ಕುಗಳಿವೆ ಎಂದು ತಿಳಿಸಿದರು.
ಈ ವೇಳೆ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ ಎಮ್.ಪಾಟೀಲ ಅವರು ಮಾತನಾಡಿ, ನಮ್ಮ ದೇಶವು ವಿಭಿನ್ನ ಭಾಷೆಗಳು, ಧರ್ಮಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಹೊಂದಿದೆ. ಈ ವೈವಿಧ್ಯತೆಯೇ ನಮಗೆ ಶಕ್ತಿಯನ್ನು ನೀಡುತ್ತದೆ. ನಮ್ಮ ಸಂವಿಧಾನವು ಈ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ರಿಮ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಮಾತನಾಡಿ, ನಮ್ಮ ಸಂವಿಧಾನ ಜಾರಿ ಬಂದ ದಿನ ಇದಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕುತೂಹಲ ಹೊಂದಿರುವ ಯುವ ಮನಸ್ಸುಗಳಿಗೆ ಉತ್ತಮ ದಿನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ರಿಮ್ಸ್ ಸಂಸ್ಥೆಯ ಆರ್ಥಿಕ ಅಧಿಕಾರಿಗಳಾದ ಹನುಮೇಶ್, ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ.ಕೆ, ಸಂಘವಿ ಲಯೇಸನ್ ಅಧಿಕಾರಿಗಳಾದ ಡಾ.ಅರವಿಂದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿಜಯ ಶಂಕರ, ಸ್ಥಾನಿಕ ಅಧಿಕಾರಿ ಡಾ.ಶಾಮಣ್ಣ ಮಾಚನೂರ್, ಪ್ರಾಂಶುಪಾಲರು ನರ್ಸಿಂಗ್ ಕಾಲೇಜ್ ಶ್ರೀಶೈಲ್ ಶಂಕರಶೆಟ್ಟಿ, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರು ಶ್ರೀನಿವಾಸ, ದೈಹಿಕ ಶಿಕ್ಷಕ ನತಾನಿಯಲ್ ಸೇರಿದಂತೆ ವಿವಿಧ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ, ಡಿ ವರ್ಗದ ನೌಕರರು, ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.







