ರಾಯಚೂರು | ಕ್ರೀಡಾಂಗಣ ನಿರ್ಮಿಸಲು ಮಾನವ ಬಂಧುತ್ವ ವೇದಿಕೆ ಮುದಗಲ್ ಘಟಕದಿಂದ ಮನವಿ

ರಾಯಚೂರು : ಲಿಂಗಸೂಗೂರು ತಾಲ್ಲೂಕಿನ ಮುದಗಲ್ಲ ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ವೇ ನಂ. 475 ಮತ್ತು 593 ರ ಸರಕಾರಿ ಜಾಗದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ಮಾನವ ಬಂಧುತ್ವ ವೇದಿಕೆ ಮುದಗಲ್ ಘಟಕದ ಯುವಕರು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶರಣೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುದಗಲ್ ಪಟ್ಟಣದಲ್ಲಿ ಸರಿಸುಮಾರು 45,000 ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಪ್ರಸ್ತುತ ಯಾವುದೇ ಸೂಕ್ತವಾದ ಕ್ರೀಡಾ ಸೌಲಭ್ಯಗಳಿಲ್ಲದ ಕಾರಣ, ಯುವಕರು ತಮ್ಮ ಪ್ರತಿಭೆ ಪ್ರದರ್ಶಿಸಲು ಬೇಕಾದ ವೇದಿಕೆಗಳಿಂದ ವಂಚಿತರಾಗಿದ್ದಾರೆ ಎಂದು ಯುವಕರು ಅಸಮಾಧಾನ ವ್ಯಕ್ತಪಡಿಸಿದರು.
ಯುವಕರ ಶಾರೀರಿಕ ಹಾಗೂ ಮಾನಸಿಕ ವಿಕಾಸಕ್ಕಾಗಿ ಕ್ರೀಡೆ ಅತ್ಯಗತ್ಯ "ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಗೊಂಡರೆ ಕ್ರೀಡಾ ಸ್ಫೂರ್ತಿ ಹೆಚ್ಚುವುದರ ಜೊತೆಗೆ ಹಿರಿಯರು, ಮಹಿಳೆಯರು ಹಾಗೂ ವಯೋವೃದ್ಧರು ಬೆಳಗಿನ ವ್ಯಾಯಾಮ, ನಡಿಗೆ ಮತ್ತು ಗಾಳಿ ಸಂಚಾರಕ್ಕಾಗಿ ಈ ಮೈದಾನವನ್ನು ಬಳಸಿಕೊಳ್ಳಬಹುದು" ಎಂದು ತಿಳಿಸಿದರು.
ಮುದಗಲ್ಲದ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಾಯವಾಗುವಂತಹ ಈ ಕ್ರೀಡಾಂಗಣದ ನಿರ್ಮಾಣದ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಮಾನವ ಬಂಧುತ್ವ ವೇದಿಕೆ ಮುದಗಲ್ ಘಟಕ ಅಧ್ಯಕ್ಷ ಸಂಜೀವ ಮುದಗಲ್, ಇಕ್ಬಾಲ್ ಉಸ್ತಾದ್, ಬಸವರಾಜ ದೊಡ್ಡಮನಿ, ಮೌನೇಶ ಶಿವನಗುತ್ತಿ, ದೇವರಾಜ ಯಾದವ, ಅಶೋಕ ಜೋಗಿ ಇನ್ನಿತರರು ಹಾಜರಿದ್ದರು.







