ರಾಯಚೂರು ಜಿಲ್ಲೆಗೆ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಲು ಕುಮಾರಸ್ವಾಮಿಗೆ ಮನವಿ

ರಾಯಚೂರು : ಅಭಿವೃದ್ಧಿ ವಂಚಿತ, ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜೆಡಿಎಸ್ ಜಿಲ್ಲಾಘಟಕದಿಂದ ಇಂದು ಮಂತ್ರಾಲಯದಲ್ಲಿ ಮನವಿ ಸಲ್ಲಿಸಲಾಯಿತು.
ಮಂತ್ರಾಲಯದ ರಾಘವೇಂದ್ರ ಸ್ವಾಮಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿ, ಕರ್ನಾಟಕ ಸೇರಿ ದೇಶದ ಎಂಟು ರಾಜ್ಯಗಳಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ರಾಯಚೂರು ಜಿಲ್ಲೆ ಸೂಕ್ತವಾಗಿದೆ. ಇಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತದೆ. ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜಿನ್ನಿಂಗ್ ಫ್ಯಾಕ್ಟರಿ ಗಳಿವೆ ಹಾಗೂ ಹೆಚ್ಚು ಹತ್ತಿ ಬೆಳೆಯಲಾಗುತ್ತದೆ. ದೇಶ, ವಿದೇಶಗಳಿಗೆ ಇಲ್ಲಿನ ಜಿನ್ನಿಂಗ್ ನಿಂದ ಹತ್ತಿಯ ಬೇಲ್ ತಯಾರಿಸಿ ರಫ್ತು ಮಾಡಲಾಗುತ್ತಿದೆ. ಏಷ್ಯದಲ್ಲಿಯೇ ಅತಿ ದೊಡ್ಡದಾದ ಎಪಿಎಂಸಿ ಹೊಂದಿದೆ ಎಂದು ತಿಳಿಸಿದರು.
ರಾಯಚೂರು ಜಿಲ್ಲೆ ಸೂಕ್ತವಾಗಿದ್ದು ಟೆಕ್ಸ್ ಟೈಲ್ ಪಾರ್ಕ್ ಕಲಬುರಗಿ ಜಿಲ್ಲೆಗೆ ಮಂಜೂರು ಮಾಡಿದ್ದು, ಅಲ್ಲಿ ಅನೇಕ ಅಡೆತಡೆ ಎದುರಾಗುತ್ತಿದೆ ಎಂದು ಕೇಂದ್ರದ ತಂಡ ತಿಳಿಸಿದ್ದು, ಶೀಘ್ರವೇ ಮನವರಿಕೆ ಮಾಡಿ ರಾಯಚೂರಿಗೆ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು.





