ರಾಯಚೂರು | ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿ : PDO ಅಮಾನತು ಆದೇಶಕ್ಕೆ ಕೆಎಸ್‌ಎಟಿ ತಡೆ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಲಿಂಗಸುಗೂರು ಶಾಸಕನ ಆಪ್ತ ಸಹಾಯಕರೂ ಆಗಿರುವ ಪಿಡಿಓ ಪ್ರವೀಣ್ ಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ತಡೆ ನೀಡಿದೆ.
ಆರೆಸ್ಸೆಸ್ ಶತಮಾನೋತ್ಸವ ಹಿನ್ನಲೆಯಲ್ಲಿ ಅ.12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಸಮವಸ್ತ್ರ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ಗಣವೇಷಧಾರಿಯಾಗಿ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಪಿಡಿಓ ಪ್ರವೀಣ್ ಭಾಗವಹಿಸಿದ್ದರು.
ಇದರಿಂದಾಗಿ ಪ್ರವೀಣ್, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021ರ ನಿಯಮ 3ರ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಕಾಲದಲ್ಲಿಯೂ ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು, ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದ್ದು ಹಾಗೂ ಸರ್ಕಾರಿ ನೌಕರನಿಗೆ ತಕ್ಕದಲ್ಲದನ್ನು ಮಾಡಬಾರದೆಂಬುದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಅಮಾನತು ಮಾಡಿ ಆದೇಶ ನೀಡಿದ್ದರು.
ಈ ಬಗ್ಗೆ ಭೀಮ್ ಆರ್ಮಿ ಸೇರಿದಂತೆ ಕೆಲ ದಲಿತಪರ ಸಂಘಟನೆಗಳು ಪಿಡಿಒ ಅಮಾನತು ಆದೇಶ ಸ್ವಾಗತಿಸಿದ್ದರು ಹಾಗೂ ಅವರು ಸಿರವಾರ ತಾಲೂಕಿನ ಗಣದಿನ್ನಿ ಹಾಗೂ ಹಿರೆಹಣಗಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮಾಡಿದ್ದು ತನಿಖೆ ನಡೆಸಬೇಕು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಒತ್ತಾಯಿಸಿದ್ದರು. ಇದೆಲ್ಲದರ ಮಧ್ಯೆ ಈಗ ಪಿಡಿಒ ಪ್ರವೀಣಕುಮಾರ ಅವರ ಅಮಾನತು ಆದೇಶಕ್ಕೆ ತಡೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.







