Raichur | ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವಕ್ಕೆ ಚಾಲನೆ

ರಾಯಚೂರು: ರಾಯಚೂರು ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ 135 ಕೃಷಿ ಪದವಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ (RAWE) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಂದಿನ 70 ದಿನಗಳ ಕಾಲ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ರೈತರೊಂದಿಗೆ ವಾಸ್ತವ್ಯ ಹೂಡಿ, ಅವರೊಂದಿಗೆ ಒಡನಾಟ ಬೆಳೆಸುವ ಮೂಲಕ ಕೃಷಿಯ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಲಿದ್ದಾರೆ. ಕೃಷಿ ಚಟುವಟಿಕೆಗಳ ವಿವಿಧ ಹಂತಗಳಲ್ಲಿ ಪಾಲ್ಗೊಳ್ಳುವುದು, ಸ್ಥಳೀಯ ಸಂಘ–ಸಂಸ್ಥೆಗಳ ಕಾರ್ಯವೈಖರಿ ಅಧ್ಯಯನ, ಕೃಷಿ ವಸ್ತುಪ್ರದರ್ಶನ ಆಯೋಜನೆ ಸೇರಿದಂತೆ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಪ್ರಸ್ತುತ 45 ವಿದ್ಯಾರ್ಥಿಗಳಂತೆ ಒಟ್ಟು 135 ವಿದ್ಯಾರ್ಥಿಗಳನ್ನು ಮಸ್ಕಿ ತಾಲೂಕಿನ ಸಂತೆಕಲ್ಲೂರು, ಅಮೀನಗಡ ಹಾಗೂ ವಟಗಲ್ ಗ್ರಾಮಗಳಿಗೆ ನಿಯೋಜಿಸಲಾಗಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಶಿಬಿರಕ್ಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಚಾಲನೆ ನೀಡಿ ಮಾತನಾಡಿ, ಕೃಷಿ ಶಿಕ್ಷಣವು ಕೇವಲ ತರಗತಿ ಕೊಠಡಿಗೆ ಸೀಮಿತವಾಗದೆ, ಹೊಲ–ಗದ್ದೆಗಳ ಅನುಭವದೊಂದಿಗೆ ಸಮೃದ್ಧವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿಗಳು, ಸವಾಲುಗಳು ಹಾಗೂ ಅಗತ್ಯಗಳನ್ನು ತಿಳಿದುಕೊಳ್ಳಬೇಕು. ಬೇಸಾಯಶಾಸ್ತ್ರ, ಮಣ್ಣು ಸಂರಕ್ಷಣೆ, ರೋಗ–ಕೀಟ ಹತೋಟಿ, ಬೀಜೋತ್ಪಾದನೆ, ಕೃಷಿ ಇಂಜಿನಿಯರಿಂಗ್ ತಂತ್ರಜ್ಞಾನ, ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸೇರಿದಂತೆ ವಿವಿಧ ವಿಷಯಗಳನ್ನು ರೈತರ ಜಮೀನಿನಲ್ಲಿ ಪ್ರಾಯೋಗಿಕವಾಗಿ ಕಲಿಯಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕೌಶಲ್ಯ, ಗ್ರಾಮೀಣ ಜೀವನದ ಅರಿವು ಹಾಗೂ ರೈತರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಮಹತ್ವದ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಗುರುರಾಜ ಸುಂಕದ, ಡೀನ್‌ರಾದ ಡಾ.ಜಗಜೀವನ್ ರಾಮ್, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಡಾ.ಜಾಗೃತಿ ಬಿ. ದೇಶಮಾನ್ಯ, ಡಾ. ಶಕುಂತಲಾ, ಡಾ. ಬಸವರಾಜ ಹುಲಗೂರ, ಡಾ.ಅಶ್ವಥ್ಥನಾರಾಯಣ, ಡಾ.ಲೋಕೆಶ್, ಡಾ.ಸ್ವಪ್ನಾ ಹಾಗೂ ಡಾ.ಚನ್ನಪ್ಪ ಉಪಸ್ಥಿತರಿದ್ದರು.






