ರಾಯಚೂರು | ಭೂಮಾನಂದ ಹತ್ಯೆ ಖಂಡಿಸಿ ಆ.23 ರಿಂದ ಬೃಹತ್ ಹೋರಾಟ: ಎಸ್ ಮಾರೆಪ್ಪ

ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಅವರ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಪ್ರಕರಣದ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬಹುಜನ ಮುಖಂಡ ಭೂಮಾನಂದ ಕಗ್ಗೋಲೆ ವಿರೋಧಿ ಒಕ್ಕೂಟದ ಮುಖಂಡ ಎಸ್. ಮಾರೆಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಾನಂದ ಅವರ ಹತ್ಯೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ. ಕೆಲವರು ಆರೋಪಿಗಳ ಕುಟುಂಬದ ಪರ ನಿಂತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈದ್ರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಹತ್ಯೆಯ ಬಗ್ಗೆ ಕನಿಷ್ಠ ಅನುಕಂಪವನ್ನೂ ವ್ಯಕ್ತಪಡಿಸದೆ ಆರೋಪಿಗಳ ಕುಟುಂಬದ ಪರ ನಿಂತಿರುವುದು ನೈತಿಕ ದಿವಾಳಿತನ ಮತ್ತು ಸ್ವಜಾತಿ ಪಕ್ಷಪಾತವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಕಾಪಾಡುವ ಜವಾಬ್ದಾರಿ ಎಲ್ಲ ಸಮುದಾಯಗಳ ಮುಖಂಡರು ಮತ್ತು ಸಂಘಟನೆಗಳ ಮೇಲಿದೆ ಎಂದರು.
ಭೂಮಾನಂದ ಹಾಗೂ ಅವರ ಕುಟುಂಬದ ಪರವಾಗಿ ದಲಿತ ಸಂಘಟನೆಗಳು ನಿಲ್ಲಲಿದ್ದು, ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು. ಆರೋಪಿಗಳ ಪರ ನಿಲ್ಲುವವರ ನಿಲುವನ್ನು ಜನರ ಮುಂದೆ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದರು. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಪ್ರಕರಣದ ಕುರಿತು ಮೌನ ವಹಿಸಿರುವುದನ್ನೂ ಅವರು ಖಂಡಿಸಿದರು.
ಪ್ರಕರಣದ ಆರೋಪಿಯೊಬ್ಬರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡುವಂತೆ ಮನವಿ ಸಲ್ಲಿಸಿರುವ ಜಿಲ್ಲಾ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಸಮಿತಿ ಸದಸ್ಯರನ್ನು ಸಮಿತಿ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಧರಂಸಿಂಗ್ ಅವರು ಬರ ವೀಕ್ಷಣೆಗೆ ಸಮೀಪದ ಗ್ರಾಮಕ್ಕೆ ಭೇಟಿ ನೀಡಿದರೂ ಹದ್ದಿನಾಳಕ್ಕೆ ತೆರಳಿ ಭೂಮಾನಂದ ಕುಟುಂಬಕ್ಕೆ ಸಾಂತ್ವನ ಹೇಳದಿರುವುದನ್ನು ಖಂಡಿಸಿದರು. ಇದನ್ನು ವಿರೋಧಿಸಿ ಆಗಸ್ಟ್ 15ರಂದು ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಭೂಮಾನಂದ ಹತ್ಯೆ ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಆಗಸ್ಟ್ 23ರಂದು ಹದ್ದಿನಾಳ ಗ್ರಾಮದಿಂದ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ರ‍್ಯಾಲಿಯು ಗಬ್ಬೂರು, ಸುಲ್ತಾನಪುರ, ಮುರಾನಪುರ, ಕಲ್ಮಾಲ ಮಾರ್ಗವಾಗಿ ಅಸ್ಕಿಹಾಳ ಸಮೀಪದ ಮುಗಳಖೋಡ ಮಠ ತಲುಪಿ ವಾಸ್ತವ್ಯ ಹೂಡಲಿದೆ.
ಆಗಸ್ಟ್ 24ರಂದು ಬೆಳಿಗ್ಗೆ ಮುಗಳಖೋಡ ಮಠದಿಂದ ಪಾದಯಾತ್ರೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿ ಬೃಹತ್ ಬಹಿರಂಗ ಸಮಾವೇಶ ನಡೆಸಲಾಗುವುದು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಮಾಜದ ಮುಖಂಡರು ಹಾಗೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಭೂಮಾನಂದ ಹತ್ಯೆ ಪ್ರಕರಣದ ಕುರಿತು ಮೀಸಲು ಕ್ಷೇತ್ರದ ಶಾಸಕರು ಹಾಗೂ ಸಂಸದರು ತಮ್ಮ ಮೌನ ಮುರಿದು ಸ್ಪಷ್ಟವಾಗಿ ಮಾತನಾಡಬೇಕು. ಪ್ರಕರಣದಲ್ಲಿ ನ್ಯಾಯದ ಪರ ತಮ್ಮ ನಿಲುವನ್ನು ಬಹಿರಂಗಪಡಿಸಬೇಕು ಎಂದು ಮಾರೆಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರನಾಥ ಪಟ್ಟಿ, ಜೆ.ಬಿ. ರಾಜು, ಶಿವರಾಜ ಅಕ್ಕರಕಿ, ಅಂಬಣ್ಣ ಆರೋಲಿಕರ್, ಎಂ.ಆರ್. ಭೇರಿ, ಹೇಮರಾಜ ಅಸ್ಕಿಹಾಳ, ಜೈಭೀದುವಲ್ಲಭ, ಹನುಮಂತ ಮನ್ನಾಪುರೆ, ನರಸಿಂಹಲು ವಿಶ್ವನಾಥ ಪಟ್ಟಿ, ಮಾನಪ್ಪ ಮೇಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






