ರಾಯಚೂರು | ಸಹಾರ ಶಿಕ್ಷಣ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ರಾಯಚೂರು: ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿನ ಅಲ್ಪಸಂಖ್ಯಾತರು ಉನ್ನತ ಮಟ್ಟದ ಶಿಕ್ಷಣ ಸ್ಥಾಪಿಸಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸಲಹೆ ನೀಡಿದರು.
ಇಲ್ಲಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮುದಾಯದ 'ಸಹಾರ ಎಜುಕೇಷನ್ ಟ್ರಸ್ಟ್ ಮತ್ತು ಚಾರಿಟೇಬಲ್ ಟ್ರಸ್ಟ್ ' ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಮರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಅವಶ್ಯವಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರೇ ಸ್ಥಾಪಿಸಿಕೊಂಡಿರುವ ಸಹಾರ ಎಜುಕೇಶನ್ ಟ್ರಸ್ಟ್ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಸ್ಲಿಮರು ತಮ್ಮ ಶಕ್ತಿ ಸಾಮರ್ಥ್ಯ ಅರ್ಥಮಾಡಿಕೊಳ್ಳಬೇಕು ಎಂದರು.
ಆಧುನಿಕ ಕಾಲದಲ್ಲಿ ಸರ್ಕಾರ ಅನೇಕ ಸೌಲತ್ತು ಕಲ್ಪಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಕೆಕೆಆರ್ ಡಿಬಿ ಮಂಡಳಿಯಿಂದ ಬಜೆಟ್ ನಲ್ಲಿ 5,000 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಮಂಡಳಿಯ ಅಧ್ಯಕ್ಷ ಅಜಯಸಿಂಗ್, ಸಚಿವ ಎನ್.ಎಸ್.ಬೋಸರಾಜು, ಎಂಎಲ್ ಸಿ ಎ.ವಸಂತಕುಮಾರ ಅವರಿಗೆ ತಿಳಿಸಿ ಕುಂದುಕೊರತೆ ನಿವಾರಿಸಿಕೊಳ್ಳಬೇಕು. ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸೆ.11ರಂದು ಅಬ್ದುಲ್ ಕಲಾಂ ಆಝಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಅವರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಮಾತನಾಡಿ, ಯಾವುದೇ ಸಮಾಜ ಸಂಪೂರ್ಣ ಅಭಿವೃದ್ಧಿ ಸಾಧಿಸಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ವ್ಯಕ್ತಿತ್ವ ರೂಪಿಸುತ್ತದೆ. ಇಂದು ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ, ಅನೇಕರಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಜನಸಂಖ್ಯೆ ಹೆಚ್ಚಾದಂತೆಲ್ಲ ಸೌಲಭ್ಯ ಎಲ್ಲರಿಗೂ ತಲುಪಲು ಕಷ್ಟಸಾಧ್ಯ. ಹೀಗಾಗಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಶಿಕ್ಷಣ ನೀಡುತ್ತಿವೆ. ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಸರ್ಕಾರ ಕುಂದು ಕೊರತೆಗಳನ್ನು ನಿವಾರಿಸಬೇಕು. ಈ ನಿಟ್ಟಿನಲ್ಲಿ ಸಮುದಾಯದ ಪರ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಶೀರುದ್ದೀನ್ ಅವರು ಉತ್ತಮ ಶಿಕ್ಷಕರಿಗೆ ತಲಾ 10 ಸಾವಿರ ರೂ. ಬಹುಮಾನವಾಗಿ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ವಕ್ತಾರ ಡಾ.ರಝಾಕ್ ಉಸ್ತಾದ್, ಸಹಾರ ಎಜುಕೇಶನ್ ಟ್ರಸ್ಟ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್, ಅಬ್ದುಲ್ ಹೈ ಫೆರೋಜ್ ಮಾತನಾಡಿದರು.
ಟ್ರಸ್ಟ್ ಉಪಾಧ್ಯಕ್ಷ ಶೇಖ್ ಮೆಹಬೂಬ್, ಖಜಾಂಚಿ ಎಂ.ಡಿ ಫಝಲುಲ್ಲಾ ಶೇಕ್, ಮಹಾನಗರ ಪಾಲಿಕೆಯ ಉಪಾಧ್ಯಕ್ಷ ಜೆ.ಸಾಜೀದ್ ಸಮೀರ್, ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮುಖಂಡ ಮುಹಮ್ಮದ್ ಶಾಲಂ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಮೌಲಾನಾ ಫರೀದ್ ಖಾನ್, ವಕ್ತಾರ ಡಾ.ರಝಾಕ್ ಉಸ್ತಾದ್, ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಷಾ, ಸುಜಾತುಲ್ಲಾ, ಆರ್ ಡಿಎ ಮಾಜಿ ಅಧ್ಯಕ್ಷ ಅಬ್ದುಲ್ ಕರೀಂ, ಹ್ಯಾರಿಸ್ ಸಿದ್ದೀಖಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಶೀರುದ್ದೀನ್, ಗುಸ್ಮಾ ಅಧ್ಯಕ್ಷ ರವಿಕುಮಾರ್, ಪ್ರಥಮದರ್ಜೆ ಗುತ್ತೇದಾರ, ಸಮಾಜ ಸೇವಕ ಅಕ್ಬರ್ ಪಾಷಾ, ಟ್ರಸ್ಟ್ ಸದಸ್ಯರಾದ ಕೋಸಗಿ ಮುಹಮ್ಮದ್ ಇಕ್ಬಾಲ್, ಸೈಯದ್ ಜುಬೇರ್ ಮೋಯಿನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.







