ರಾಯಚೂರು | ಸೆ.13 ರಂದು ಸಹಾರ ಟ್ರಸ್ಟ್‌ನಿಂದ ಅತ್ಯುತ್ತಮ ಅಲ್ಪಸಂಖ್ಯಾತರ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ರಾಯಚೂರು: ಸಹಾರಾ ಎಜುಕೇಷನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಲ್ಪಸಂಖ್ಯಾತರ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸಮರ್ಪಣೆಯನ್ನು ಗುರುತಿಸಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ನೀಡಲಾಗುತ್ತಿದ್ದು, ಕಾರ್ಯಕ್ರಮವು ಸೆ.13ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಹೈ ಫಿರೋಜ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ನಸೀರ್ ಅಹ್ಮದ್ ಭಾಗವಹಿಸಲಿದ್ದಾರೆ. ಜೊತೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ವಿಧಾನ ಪರಿಷತ್ ಸದಸ್ಯ ಎ. ವಸಂತ್ ಕುಮಾರ್ ಸೇರಿದಂತೆ ಶಾಸಕರು ಹಾಗೂ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಲ್ಲಿ ಸೇವೆಯನ್ನು ಆಧಾರವಿಟ್ಟು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ತಲಾ ಒಬ್ಬರಂತೆ, ಪ್ರೌಢಶಾಲಾ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಿಂದ ತಲಾ ಒಬ್ಬರಂತೆ ಸೇರಿ ಒಟ್ಟು 70ಕ್ಕೂ ಹೆಚ್ಚು ಶಿಕ್ಷಕರು ಸನ್ಮಾನಿಸಲ್ಪಡಲಿದ್ದಾರೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ಇಕ್ಬಾಲ್, ಶೇಖ್ ಮಹೆಬೂಬ್, ಕೋಸ್ಗಿ ಮುಹಮ್ಮದ್ ಇಕ್ಬಾಲ್, ಮೋಸಿನ್ ಜಮಾಲ್, ಸೈಯದ್ ಜುಬೇರ್ ಮೊಹಿಯುದ್ದಿನ್, ಮುಹಮ್ಮದ್ ಫಝುಲ್ಲಾ ಶೈಖ್, ಮುಹಮ್ಮದ್ ಖಾಸಿಂ, ಸೈಯದ್ ಶುಜಾತುಲ್ಲಾ ಹುಸೇನ್, ಅದ್ನಾನ್ ಮನ್ಜೂರ್ ಸೇರಿದಂತೆ ಅನೇಕರಿದ್ದರು.







