ರಾಯಚೂರು | ನಕಲಿ ಗೊಬ್ಬರ ಕ್ರಿಮಿನಾಶಕ ಮಾರಾಟ ಆರೋಪ : ನ್ಯೂ. ರಾಘವೇಂದ್ರ ಫರ್ಟಿಲಿಜರ್ಸ್ ಪರವಾನಗಿ ರದ್ದು

ಸಾಂದರ್ಭಿಕ ಚಿತ್ರ
ರಾಯಚೂರು: ಯಾವುದೇ ಪರವಾನಗಿಯಿಲ್ಲದೇ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಹಾಗೂ ಅವಧಿ ಮೀರಿದ ಕ್ರಿಮಿನಾಶಕ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ದೇವದುರ್ಗ ತಾಲೂಕಿನ ನಗರಗುಂಡ ಕ್ರಾಸ್ ಬಳಿಯ ನ್ಯೂ.ರಾಘವೇಂದ್ರ ಫರ್ಟಿಲಿಜರ್ಸ್ ಅಂಗಡಿಯ ಪರವಾನಗಿ ರದ್ದುಪಡಿಸಿದ್ದಾರೆ.
ನಕಲಿ ಗೊಬ್ಬರ ಕ್ರಿಮಿನಾಶಕ ಮಾರಾಟ ಹಾಗೂ ಅನಧಿಕೃತವಾಗಿ ಗೊಬ್ಬರ ಮಾರಾಟದ ಬಗ್ಗೆ ರೈತ ಸಂಘಟನೆಯಿಂದ ದೂರು ನೀಡಿದ್ದು, ಅಂಗಡಿ ಮಾಲಕರಿಗೆ ನೋಟೀಸ್ ನೀಡಿದರೂ ಸ್ಪಷ್ಟ ಉತ್ತರ ನೀಡದೇ ಜಾರಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಯಾವುದೇ ಪರವಾನಿಗೆಯನ್ನು ಪರಿಶೀಲನೆಗೆ ಪ್ರಸ್ತುತ ಪಡಿಸಿರುವುದಿಲ್ಲ, ಮಳಿಗೆಯಲ್ಲಿ ಯಾವುದೇ ಬಿಲ್ಲು ಪುಸ್ತಕ ಹಾಗೂ ದಾಸ್ತಾನು ಪುಸ್ತಕ ನಿಭಾಯಿಸಿರುವುದಿಲ್ಲ ಎಂದು ಮನಗಂಡು ಹಾಗೂ ರೈತರಿಗೆ ಮೋಸವಾಗಬಾರದು ಎಂದು ಪರವಾನಗಿ ರದ್ದು ಪಡಿಸಬೇಕು ಎಂದು ದೇವದುರ್ಗ ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ಪರವಾನಗಿ ರದ್ದು ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





