ರಾಯಚೂರು | ಮೇ 7ರಂದು ʼಸಂವಿಧಾನ ಉಳಿಸಿ ಅಭಿಯಾನʼ : ವಸಂತಕುಮಾರ
ʼಪ್ರಧಾನಿ ಮೋದಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆʼ

ರಾಯಚೂರು : ಪ್ರಧಾನಿ ಮೋದಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಬೆಲೆ ಏರಿಕೆ ವಿಪರೀತವಾಗಿದ್ದು, ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಸರ್ಕಾರದ ವಿರುದ್ದ ಮೇ 7 ರಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂವಿಧಾನ ಉಳಿಸಿ ಅಭಿಯಾನ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ತಿಳಿಸಿದರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೂ ಮುಂಚೆ ಅಚ್ಚೇ ದಿನ್ ಆಯೇಂಗೆ ಎಂದು ಸುಳ್ಳು ಆಶ್ವಾಸನೆಯನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮೋದಿ ಸರ್ಕಾರ ದಿನ ಬಳಕೆ ವಸ್ತಗಳ ಮೇಲೆ ಸಹ ಜಿಎಸ್‍ಟಿ ಹಾಕಿದೆ. ಅಗತ್ಯ ವಸ್ತುಗಳು ಹಾಗೂ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಬೆಲೆ ಯುಪಿಎ ಸರ್ಕಾರದ ಅವಧಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.
ಯುಪಿಎ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲೆಂಡರ್ ಬೆಲೆ 450 ರೂ. ಇತ್ತು. ಈಗ 900 ರೂ. ಆಗಿದೆ. ಚಿನ್ನದ ಬೆಲೆ 10 ಗ್ರಾಂ. 26 ಸಾವಿರ ರೂ. ಇತ್ತು ಈಗ 1 ಲಕ್ಷ ರೂ. ಆಗಿದೆ. ಈ ದುಬಾರಿ ಬೆಲೆಯ ಬಗ್ಗೆ ಯಾವ ಬಿಜೆಪಿ ನಾಯಕರು ಚಕಾರ ಎತ್ತುತ್ತಿಲ್ಲವೆಂದರು.
ಬಲಪಂಥೀಯಪರ ಸರ್ಕಾರ :
ಬಿಜೆಪಿ ಸರ್ಕಾರ ಕೇವಲ ಬಲಪಂಥಿಯರ ಪರವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಮತ್ತು ಮೋದಿ ಅವರ ಕುಂತತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾಧ್ಯಂತ ಪ್ರತಿಭಟನಾ ಸಮಾವೇಶಗಳು ವಿಭಾಗ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದೇ ರೀತಿ ಕಲ್ಯಾಣ ಕರ್ನಾಟಕದ ಪ್ರತಿಭಟನಾ ಸಮಾವೇಶವನ್ನು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮೇ 7ರಂದು ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ಮಂತ್ರಿಗಳು, ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ವಕ್ತಾರ ಡಾ.ರಝಾಕ ಉಸ್ತಾದ, ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಶಾ, ಬಸವರಾಜ ದರೂರು, ಅಬ್ದುಲ್ ಕರೀಮ, ಮೊಹಮ್ಮದ ಉಸ್ಮಾನ್ ಹಾಗೂ ಇತರರು ಉಪಸ್ಥಿತರಿದ್ದರು.







